More

    ಒಬ್ಬನಿಗೆ ಸೋಂಕು, 20 ಸಾವಿರ ಜನರಿಗೆ ಆತಂಕ…!

    ಕಾಕಿನಾಡ: ಪೂರ್ವ ಗೋದಾವರಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಅನಾರೋಗ್ಯ ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಿದ ಅರ್ಧ ಗಂಟೆಯಲ್ಲಿಯೇ ಆತ ಮೃತಪಟ್ಟಿದ್ದಾನೆ. ಆತನಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿ ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿದೆ.

    ಗ್ರಾಮಸ್ಥರು ಅಷ್ಟೊಂದು ಆತಂಕಪಡಬೇಕಿಲ್ಲ ಎಂದು ಯಾರೂ ಸಮಾಧಾನ ಹೇಳುವಂತೆಯೂ ಇಲ್ಲ, ಏಕೆಂದರೆ ಈತನ ಸಂಪರ್ಕದಲ್ಲಿದ್ದ ಗ್ರಾಮದ 116 ಜನರಿಗೆ ಸೋಂಕು ಇರುವುದು ಈಗಾಗಲೇ ಖಚಿತವಾಗಿದೆ. ಈ 116 ಜನರೊಂದಿಗೆ ಸಂಪರ್ಕ ಇರುವುದನ್ನು ಲೆಕ್ಕ ಹಾಕಿದರೆ, ಗ್ರಾಮದ 20 ಸಾವಿರಕ್ಕೂ ಅಧಿಕ ಜನರಿಗೆ ಸೋಂಕಿನ ಭೀತಿ ಕಾಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇಡೀ ಗ್ರಾಮವನ್ನೇ ಕಂಟೇನ್​ಮೆಂಟ್​ ಜೋನ್ ಎಂದು ಘೋಷಿಸಿದ್ದಾರೆ.

    ಇದನ್ನೂ ಓದಿ; ಕೋವಿಡ್​ ರೋಗಿಗಳಿಗೆ ಮಲೇರಿಯಾ ಮದ್ದು; ಪರೀಕ್ಷೆ ಮುಂದುವರಿಸಿದ ವಿಶ್ವ ಆರೋಗ್ಯ ಸಂಸ್ಥೆ

    ಕಾಕಿನಾಡದಿಂದ 20 ಕಿ.ಮೀ ದೂರವಿರುವ ಗೊಲ್ಲಾಲ ಮಾಮಿದಾದಾ ಗ್ರಾಮದಲ್ಲಿ 5000ಕ್ಕೂ ಅಧಿಕ ಮನೆಗಳಿವೆ, ಶತಮಾನಗಳ ಹಳೆಯ ಸೂರ್ಯನಾರಾಯಣ ಸ್ವಾಮಿ ದೇಗುಲದಿಂದಾಗಿ ಈ ಗ್ರಾಮ ಖ್ಯಾತಿ ಪಡೆದಿದೆ. ಇಲ್ಲಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕಿದ್ದ, ವೃತ್ತಿಯಿಂದ ಫೋಟೋಗ್ರಾಫರ್​ ಆಗಿದ್ದ 53 ವರ್ಷದ ಈ ವ್ಯಕ್ತಿಗೆ ಸೋಂಕಿರುವುದು ಆರಂಭದಲ್ಲಿ ಗೊತ್ತಾಗಿಲ್ಲ. ಗೊತ್ತಾದಾಗ ಕಾಲ ಮೀರಿ ಹೋಗಿತ್ತು. ಈತನ ಸಂಪರ್ಕಕ್ಕೆ ಬಂದ ಎಲ್ಲರಿಗೂ ಸೋಂಕು ಖಚಿತವಾಗಿದೆ. ಬೇರೆ ಗ್ರಾಮಗಳ ಜನರಿಗೂ ಕೂಡ ಸೋಂಕು ಅಂಟಿದೆ. ಈತನಿಂದ ಪೇದಪುಡಿ ಮಂಡಲದ 150ಕ್ಕೂ ಅಧಿಕ ಜನರಿಗೆ ಕರೊನಾ ವ್ಯಾಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವೃತ್ತಿಯ ಕಾರಣದಿಂದಾಗಿ ಈತ ಹೆಚ್ಚು ಜನರ ಸಂಪರ್ಕದಲ್ಲಿದ್ದ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಮಾಸ್ಕ್​ ವಿತರಣೆ ಕಾರ್ಯಕ್ರಮದ ಫೋಟೋಗಳನ್ನು ತೆಗೆದಿದ್ದ. ನೆರೆಯ ರಾಮಚಂದ್ರಾಪುರಂ, ಅನಾಪರ್ತಿ, ಬಿಕ್ಕವೊಲು, ಮಂದಪೇಟ ಮೊದಲಾದ ಗ್ರಾಮಗಳ ಜನರು ಕೂಡ ಈತನ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

    ಇದನ್ನೂ ಓದಿ; ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…! 

    ರಾಮಚಂದ್ರಾಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದಲೇ ಈತ ಸೋಂಕಿಗೆ ಒಳಗಾಗಿರಬಹುದು ಎಂದು ಹೇಳಲಾಗಿದೆ. ಇದಲ್ಲದೇ, ಈ ವೇಳೆಯಲ್ಲಿಯೇ ಈತನ ಮಗನಲ್ಲೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಯಾರಿಂದ ಯಾರಿಗೆ ಸೋಂಕು ಅಂಟಿಕೊಂಡಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.
    ಸೋಂಕು ಖಚಿತವಾಗುವ ಮುನ್ನ ಮಗ, ತನ್ನ ಗೆಳೆಯರಿಗೆ ಸ್ಥಳೀಯ ಬೇಕರಿಯಲ್ಲಿ ಪಾರ್ಟಿ ಕೊಡಿಸಿದ್ದ. ಹೀಗಾಗಿ ಅವರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

    ಸದ್ಯ ಪೂರ್ವ ಗೋದಾವರಿ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಸೋಂಕಿತರಿದ್ದಾರೆ. ಆ ಪೈಕಿ ಶೇ.50ಕ್ಕೂ ಅಧಿಕ ರೋಗಿಗಳು ಈ ಮಂಡಲಕ್ಕೆ ಸೇರಿದವರಾಗಿದ್ದಾರೆ.

    ‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts