More

    ಬದುಕು ಕಟ್ಟಿಕೊಟ್ಟ ನರ್ಸರಿ ಉದ್ಯಮ

    ಸಿದ್ದಾಪುರ: ಎಲ್ಲ ವರ್ಗದ ಕೃಷಿಕರಿಗೆ ನರ್ಸರಿಗಳು ಅವರವರ ಆಸಕ್ತಿ ಮತ್ತು ಬೆಳೆ ಆಯ್ಕೆಗೆ ದಾರಿ ಒದಗಿಸಿದೆಯಾದರೂ ಹಲವರಿಗೆ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ. ಇದಕ್ಕೆ ಪೂರಕವೆಂಬಂತೆ ಇಲ್ಲೊಬ್ಬರು ನರ್ಸರಿಯಲ್ಲಿ ಯಶಸ್ಸು ಕಂಡು ಇತರರಿಗೆ ಮಾದರಿಯಾಗಿದ್ದಾರೆ.

    ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಅಸ್ತಾನಹಾಡಿಯ ಗದ್ದೆಮನೆ ಗಣೇಶ್ ಮತ್ತು ಭಾಗ್ಯರತಿ ದಂಪತಿ ನರ್ಸರಿ ಕೃಷಿ ಸೂತ್ರ ಅಳವಡಿಸಿಕೊಂಡು ಆರಾಮದಾಯಕ ಜೀವನ ಸಾಗಿಸುತ್ತಿದ್ದಾರೆ. ಗಣೇಶ್ ವಿವಾಹದ ನಂತರ ಪಿತ್ರಾರ್ಜಿತವಾಗಿ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಆರಂಭಿಸಿದರು. ಕೃಷಿಯೊಂದಿಗೆ ನರ್ಸರಿಯನ್ನೂ ಮನೆ ಪಕ್ಕದಲ್ಲಿ ಆರಂಭಿಸಿದರು.

    ಈ ದಂಪತಿ 12 ವರ್ಷದಿಂದ ನರ್ಸರಿ ನಡೆಸುತ್ತಿದ್ದು, ಸುಸಜ್ಜಿತ ಶೆಡ್ ನಿರ್ಮಾಣ ಮಾಡಿ ಪ್ರತಿ ವರ್ಷ ವಿವಿಧ ತಳಿಯ 70,000 ಕಾಫಿ ಸಸಿ ಗಿಡಗಳನ್ನು ಸಲಹುತ್ತಿದ್ದಾರೆ. ಇದರೊಂದಿಗೆ ಕರಿಮೆಣಸು, ಅಡಕೆ, ಹಣ್ಣು ಸೇರಿದಂತೆ ವಿವಿಧ ಬಗೆಯ ತಳಿಗಳ ಸಸಿ ಗಳನ್ನು ನರ್ಸರಿಯಲ್ಲಿದೆ. ಕೊಡಗಿನ ವಿವಿಧ ಭಾಗ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣಕ್ಕೂ ಸಸಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ವರ್ಷಕ್ಕೆ ಮೂರು ಲಕ್ಷ ರೂ.ಗೂ ಹೆಚ್ಚು ಆದಾಯ ಕಂಡುಕೊಂಡಿದ್ದಾರೆ.

    ವಿವಿಧ ಬಗೆಯ ತಳಿಗಳು: ಸಂಸ್ಕರಿಸಿದ ಬಿತ್ತನೆ ಬೀಜ ಹಾಗೂ ಕಾಡಿನಲ್ಲಿ ಸಿಗುವ ಕಪ್ಪು ಮಣ್ಣು, ಕೊಟ್ಟಿಗೆ ಗೊಬ್ಬರ, ಜೀವಾಮೃತ ಮಿಶ್ರಣ ಮಾಡಿ ಕನಿಷ್ಠ ಐದಾರು ತಿಂಗಳು ರಾಶಿ ಹಾಕುವ ಈ ದಂಪತಿ, ಮಣ್ಣು-ಗೊಬ್ಬರ ಒಂದು ಹದಕ್ಕೆ ಬಂದ ನಂತರ ಸೇರಿನಾಕಾರದ ಪ್ಲಾಸ್ಟಿಕ್ ಚೀಲಗಳಲ್ಲಿ ಬುಟ್ಟಿ ತುಂಬಿಸಿ ಒಗ್ಗಿನಲ್ಲಿ ಮೊಳಕೆ ಒಡೆದ ಸಸಿಗಳ ಬೇರುಗಳನ್ನು ದನದ ಸಗಣಿಯಲ್ಲಿ ಮಿಶ್ರಣ ಮಾಡಿ ನೆನೆಸಿಡುತ್ತಾರೆ. ಮೇನಲ್ಲಿ ನೆಟ್ಟ ಸಸಿಗಳು ಜುಲೈ ಮತ್ತು ಆಗಸ್ಟ್‌ನಲ್ಲಿ ಮಾರಾಟ ಮಾಡುತ್ತಾರೆ.

    ಇವರ ಬಳಿ ರೋಬಸ್ಟಾ ಕಾಫಿ ತಳಿಯ ಡಾರ್ಪ್, ಟಿ.ಆರ್.ನೈನ್, ಸಿ.ಆರ್.ಪೇರ್ದೀನಿಯ, ಅರೇಬಿಕಾ ತಳಿಯ ಚಂದ್ರಗಿರಿ, ಕಾಟಿಮಾರ್ ಸಸಿಗಳಿವೆ. ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಿಂದ ಕರಿಮೆಣಸು ತಳಿಯ ಕೂರ್ಗ್ ಆರ್ಕೆಡ್ ಎಕ್ಸೆಲ್ ಎಂಬ 150 ಗಿಡಗಳನ್ನು ತಂದು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ ಚಪ್ಪರ ಕಟ್ಟಿ ಬಳ್ಳಿಗಳನ್ನು ನೆಟ್ಟಿದ್ದಾರೆ. ಇವರಿಗೆ ವಿಜ್ಞಾನ ಕೇಂದ್ರದಿಂದ ಶೆಡ್‌ನೆಟ್ ಹಾಗೂ ಔಷಧ ನೀಡಲಾಗಿದೆ. ಪ್ರತಿ ವರ್ಷ ಜೂನ್, ಜುಲೈನಲ್ಲಿ ಒಂದು ಬಳ್ಳಿಗೆ 25 ರೂ.ನಂತೆ ಮಾರಾಟ ಮಾಡುತ್ತಾರೆ. ಈ ಬಳ್ಳಿ ಬೆಳೆಸಲು ಅಂದಾಜು 20 ಸಾವಿರ ರೂ. ಖರ್ಚಾಗಿದೆ ಎನ್ನುತ್ತಾರೆ ಗಣೇಶ್.
    ಇನ್ನು ಪನ್ನೀರು, ಕಲ್ಲುಬಳ್ಳಿ, ಬಡ್ಕನ್, ತೆವಂ, ಕರಿಮುಂಡ ಎಂಬ ವಿವಿಧ ಬಗೆಯ ಕರಿಮೆಣಸು ಸಸಿಗಳು ಕೂಡ ಇವೆ. ತೀರ್ಥಹಳ್ಳಿ, ನಾಟಿ, ಮಂಗಳ ತಳಿಯ ಅಡಕೆಗಳು, ಕಿತ್ತಳೆ, ಕೈ ಹುಳಿ, ನಿಂಬೆ, ತೆಂಗು, ಬಟರ್ ಫ್ರೂಟ್, ಪಪ್ಪಾಯ, ಸಪೋಟ, ಸೀಬೆ, ಲಿಚ್ಚಿ, ರಾಂಬೋಟ ಇತ್ಯಾದಿ ಗಿಡಗಳು ಇವರಲ್ಲಿ ದೊರೆಯುತ್ತವೆ. ಗಣೇಶ್ ತಮ್ಮ ಜಮೀನಿನ ಉಳಿದ ಜಾಗದಲ್ಲಿ ಅರೆಬಿಕಾ, ರೋಬಸ್ಟಾ ಕಾಫಿ, ಕಾಳುಮೆಣಸು, ಅಡಕೆ, ತೆಂಗು, ಬಾಳೆ ಸಸಿ ಬೆಳೆಸಿದ್ದಾರೆ.

    ಈ ದಂಪತಿ ಹಸು ಸಾಕಣೆಯಲ್ಲಿಯೂ ಆಸಕ್ತಿ ತೋರಿದ್ದು, ಇವರ ಬಳಿ ಕ್ರಾಸ್‌ಬ್ರೀಡ್‌ನ ನಾಲ್ಕು ಹಸುಗಳಿವೆ. ನಿತ್ಯ 6 ಲೀಟರ್ ಹಾಲು ಕರೆಯುತ್ತಿದ್ದು, ಏಳು ಗಂಟೆ ಸುಮಾರಿಗೆ ತಾವೇ ಸ್ಥಳೀಯ ಹೋಟೆಲ್ ಹಾಗೂ ಮನೆಗಳಿಗೆ ತೆರಳಿ ಲೀಟರ್‌ಗೆ 35 ರೂ.ನಂತೆ ಮಾರಾಟ ಮಾಡಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ವರ್ಷಕ್ಕೆ ಐದು ಟ್ಯಾಕ್ಟರ್ ಸಗಣಿಯನ್ನು ಹಸುಗಳಿಂದ ಪಡೆದು ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದೇ ಗೊಬ್ಬರವನ್ನು ತೋಟ ಹಾಗೂ ನರ್ಸರಿಗೆ ಬಳಸುತ್ತಾರೆ.

    ಕೋಳಿ ಮರಿಗಳನ್ನೂ ಸಾಕಿದ್ದು, ಕೋಳಿ ಹಾಗೂ ಮೊಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಆದಾಯದ ಮೂಲವನ್ನು ಹೆಚ್ಚಿಸಿಕೊಂಡಿದ್ದಾರೆ. ಒಟ್ಟಾರೆ ಜೀವನ ನಿರ್ವಹಣೆಗೆ ಕೃಷಿ, ಹೈನುಗಾರಿಕೆಯನ್ನು ಅವಲಂಬಿಸಿದ್ದು, ಮಾದರಿ ಕೃಷಿಕರಾಗಿ ಕಾಯಕ ಮಾಡುತ್ತಿರುವುದು ವಿಶೇಷ.

    ಹೂವು, ತರಕಾರಿ ಬೆಳೆ: ಮನೆಯ ಸುತ್ತ ವಿವಿಧ ಜಾತಿಯ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಅಂಥೋರಿಯಂ, ತಾವರೆ, ಗುಲಾಬಿ, ಚಟ್ಟಿ, ದಾಸವಾಳ, ಮಲ್ಲಿಗೆ, ಲಿಲ್ಲಿ, ಚೆಂಡು ಹೂ ಸೇರಿದಂತೆ ವಿವಿಧ ತಳಿಯ ಗಿಡಗಳಿವೆ. ಅಗತ್ಯಕ್ಕೆ ಬೇಕಾಗುವಷ್ಟು ತರಕಾರಿಯನ್ನು ಮನೆಯಲ್ಲೇ ಬೆಳೆಯಲಾಗುತ್ತಿದೆ. ಬೀನ್ಸ್, ಎಲೆಕೋಸು, ಬೆಂಡೆ, ಟೊಮ್ಯಾಟೊ, ಶುಂಠಿ, ಸೌತೆಕಾಯಿ, ಬದನೆ, ಮೆಣಸು, ಅರಿಶಿಣ, ಬೂದುಕುಂಬಳ ಹಾಗೂ ಸೊಪ್ಪುಗಳನ್ನು ಮನೆ ಅಂಗಳದಲ್ಲೇ ಬೆಳೆಯುತ್ತಾರೆ.

    ಕೃಷಿ ಇಲಾಖೆಯಿಂದ ದೊರೆಯುವ ಹಲವು ಯೋಜನೆಗಳನ್ನು ಬಳಸಿಕೊಂಡು 12 ವರ್ಷದಿಂದ ನರ್ಸರಿ ನಡೆಸುತ್ತಿದ್ದೇನೆ. ಆ ಮೂಲಕ ನಮ್ಮ ಕುಟುಂಬದ ಆದಾಯದ ಮೂಲವನ್ನು ಹೆಚ್ಚಿಸಿಕೊಂಡಿದ್ದೇವೆ. ಯುವಜನತೆ ಉದ್ಯೋಗವಿಲ್ಲದೆ ಪರದಾಡಬೇಕಿಲ್ಲ. ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಉದ್ಯೋಗದಲ್ಲಿ ಬರುವ ವೇತನಕ್ಕಿಂತ ಹೆಚ್ಚು ಆದಾಯ ಗಳಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು.
    ಗದ್ದೆಮನೆ ಗಣೇಶ್ ನರ್ಸರಿ ಕೃಷಿಕ, ಅಸ್ತಾನ ಹಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts