More

    ಕ್ವಾರಂಟೈನಿಗಳ ನಿತ್ಯ ನರಳಾಟ: ಕೋವಿಡ್-19 ಕೇಂದ್ರಗಳ ಅವ್ಯವಸ್ಥೆ ದರ್ಶನ

    ಎಂ.ಎನ್. ಸುರೇಶ್

    ಕನಕಪುರ: ತಾಲೂಕಿನಲ್ಲಿರುವ ಕ್ವಾರಂಟೈನ್ ಕೇಂದ್ರಗಳು ಕರೊನಾ ತಡೆಯುವ ಬದಲಾಗಿ ಸೋಂಕು ಬಿತ್ತನೆ ಮಾಡುವ ಕೇಂದ್ರಗಳಾಗಿವೆ ಎಂಬ ದೂರು ವ್ಯಾಪಕವಾಗಿದೆ.

    ಮರಳವಾಡಿ ಹೋಬಳಿ ಬಾದಗೆರೆ ಮುರಾರ್ಜಿ ದೇಸಾಯಿ ವಸತಿ ನಿಲಯ ಮತ್ತು ಕೆಲವು ಸರ್ಕಾರಿ ಹಾಸ್ಟೆಲ್​ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ ಇವುಗಳು ಅವ್ಯವಸ್ಥೆಯಿಂದ ಕೂಡಿದ್ದು, ಕ್ವಾರಂಟೈನ್ ಅವಧಿಯಲ್ಲಿ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನೋಡಿಕೊಳ್ಳಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮೂಲಸೌಲಭ್ಯ ಕೊರತೆಯಿದೆ, ಊಟ, ಔಷಧೋಪಚಾರ ಸಮರ್ಪಕವಾಗಿಲ್ಲ ಎಂಬುದು ಚಿಕಿತ್ಸೆ ಪಡೆಯುತ್ತಿರುವವರ ದೂರಾಗಿದೆ.

    ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಹತ್ತಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವವರ ಜತೆಗೆ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಗುಣಮುಖರಾಗುತ್ತಿರುವವರನ್ನು ಪ್ರತ್ಯೇಕವಾಗಿಟ್ಟಿಲ್ಲ. ಇದರಿಂದ ಸೋಂಕು ಇತರರಿಗೂ ಹರಡುವಂತಾಗುತ್ತಿದೆ. ಸಿಬ್ಬಂದಿಗಳು ಕೇಂದ್ರದಲ್ಲಿದ್ದು ಉಸ್ತುವಾರಿ ನೋಡಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕಾಲಕಾಲಕ್ಕೆ ಔಷಧ ಕೊಟ್ಟು ಚಿಕಿತ್ಸೆ ನೀಡಬೇಕು, ಆಗಾಗ ಪರೀಕ್ಷೆ ಮಾಡಿ, ಸೋಂಕು ಖಚಿತಪಟ್ಟರೆ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ರವಾನಿಸಬೇಕು. ಆದರೆ ಇಲ್ಲಿ ಇದ್ಯಾವುದೂ ಆಗುತ್ತಿಲ್ಲ ಎಂದು ದೂರಿದ್ದಾರೆ.

    ಊಟ-ತಿಂಡಿ ಕಳಪೆ

    ಊಟ-ತಿಂಡಿ ಕಳಪೆಯಾಗಿದ್ದು, ಕುಡಿಯಲು ಬಿಸಿ ನೀರಿಲ್ಲ, ಶೌಚಗೃಹಗಳಲ್ಲಿ ಸ್ವಚ್ಛತೆ ದೂರವಾಗಿದೆ. ಕ್ವಾರಂಟೈನ್ ಆಗಿರುವವರನ್ನು ಕೀಳಾಗಿ ನೋಡಲಾಗುತ್ತಿದೆ. ನರ್ಸ್​ಗಳು, ವೈದ್ಯರು ಯಾರನ್ನೂ ಪರೀಕ್ಷಿಸದೆ ಕೇವಲ ಮಾತ್ರೆಗಳನ್ನು ಕೊಡುತ್ತಿದ್ದಾರೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಕೇಳುವವರು ಇಲ್ಲದಂತಾಗಿದೆ. ಈ ಬಗ್ಗೆ ತಾಲೂಕು, ಜಿಲ್ಲಾಡಳಿತಕ್ಕೆ ಫೋಟೋ-ವಿಡಿಯೋಗಳ ಸಮೇತ ದೂರು ನೀಡಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ರೋಗ ಉಲ್ಬಣಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಕ್ವಾರಂಟೈನ್​ಗೆ ಒಳಗಾಗಿರುವವರು. ಈ ಕೇಂದ್ರಗಳಿಗೆ ದಾಖಲಾಗುವವರಿಗೆ ಪಾಸಿಟಿವ್ ಅಥವಾ ನೆಗೆಟಿವ್ ಇದೆಯೋ ಎಂಬ ಮಾಹಿತಿ ಇರುವುದಿಲ್ಲ. ತಪ್ಪು ವರದಿ ಆಧರಿಸಿ ಕೆಲವರನ್ನು ಕೇಂದ್ರಗಳಿಗೆ ಕರೆತರಲಾಗುತ್ತಿದೆ.

    ಹೋಂ ಕ್ವಾರಂಟೈನ್​ನಲ್ಲಿ ಇರಬಹುದು ಎಂದು ಸರ್ಕಾರ ಹೇಳಿದ್ದರೂ ಜಿಲ್ಲೆಯಲ್ಲಿ ಮಾತ್ರ ಕೋವಿಡ್ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರಗಳಿಗೆ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುವ ಬದಲು ಹೋಂ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಕೇಂದ್ರಗಳಿಂದ ಹೊರಬರುವವರನ್ನು ಸಮಾಜದಲ್ಲಿ ಕೀಳಾಗಿ ನೋಡಲಾಗುತ್ತಿದೆ.

    | ಕ್ವಾರಂಟೈನ್ ಕೇಂದ್ರದಲ್ಲಿರುವ ಗೃಹಿಣಿ

    ಬಾದಗೆರೆ ಕ್ವಾರಂಟೈನ್ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಲು ಮತ್ತು ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಯಾನಿಟೈಸರ್, ಮಾಸ್ಕ್ ನೀಡದ ಬಗ್ಗೆ ತನಿಖೆ ನಡೆಸಿ ಸರಿಪಡಿಸಲಾಗುವುದು.

    | ಡಾ.ನಂದಿನಿ ತಾಲೂಕು ಆರೋಗ್ಯಾಧಿಕಾರಿ, ಕನಕಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts