More

    ವಿದ್ಯುತ್‌ಗಾಗಿ ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಏಕಾಂಗಿ ಧರಣಿ

    ಮೂಡಿಗೆರೆ: ಕಾಫಿ ಸಂಸ್ಕರಣಾ ಘಟಕ ಹಾಗೂ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ ಬುಧವಾರ ಮೆಸ್ಕಾಂ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.

    ಮೆಸ್ಕಾಂಗೆ ಕಾಯಂ ಅಧಿಕಾರಿಗಳು ಇಲ್ಲದೆ ಪ್ರಭಾರ ಅಧಿಕಾರಿ ವಹಿಸಿಕೊಂಡಿರುವವರು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಹಾಜರಾಗುತ್ತಾರೆ. ವಿದ್ಯುತ್ ಕಂಬ ಮತ್ತು ತಂತಿ ಮೇಲೆ ಕಾಡುಬಳ್ಳಿ, ಮರದ ರೆಂಬೆಗಳು ಆವರಿಸಿಕೊಂಡು ಆಗಾಗ ವಿದ್ಯುತ್ ಕಡಿತವಾಗುತ್ತಿದೆ. ವೋಲ್ಟೇಜ್ ಇಲ್ಲದೆ ಕಾಫಿ ಸಂಸ್ಕರಣ ಯಂತ್ರಗಳು ಮತ್ತು ಪಂಪ್‌ಸೆಟ್‌ಗಳು ಹಾಳಾಗುತ್ತಿವೆ ಎಂದು ಆರೋಪಿಸಿದರು.
    ಪ್ರತಿ ವರ್ಷ ಜನವರಿಯಿಂದ ಮಾರ್ಚ್‌ವರೆಗೆ ಕಾಫಿ ಸಂಸ್ಕರಣೆ ಹಾಗೂ ಕಾಫಿ ಕೊಯ್ಲಿನ ನಂತರ ತೋಟಕ್ಕೆ ನೀರು ಹಾಯಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾದ್ದರಿಂದ ವಿದ್ಯುತ್ ಅಗತ್ಯವಿದೆ. ಗ್ರಾಮೀಣ ಭಾಗದ ವಿದ್ಯುತ್ ಮಾರ್ಗದಲ್ಲಿ ಬಳ್ಳಿ, ಮರದ ರೆಂಬೆ ತೆರವುಗೊಳಿಸದೆ ವರ್ಷಗಳೇ ಕಳೆದಿದೆ. ಗ್ರಾಮೀಣ ಭಾಗದಲ್ಲಿ ಪ್ರತಿ ದಿನ ಆಗಾಗ ವಿದ್ಯುತ್ ಸ್ಥಗಿತಗೊಳ್ಳುತ್ತಿರುವ ಕಾರಣ ಜನ ಕತ್ತಲಲ್ಲಿ ಕಾಲ ಕಳೆಯಬೇಕಾಗಿದೆ. ಕಡಿಮೆ ವೋಲ್ಟೇಜ್‌ನಿಂದಾಗಿ ಕಾಫಿ ಪಲ್ಪರ್ ಯಂತ್ರ ಹಾಗೂ ನೀರಾವರಿ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಲು ಒಬ್ಬ ಅಧಿಕಾರಿಯೂ ಇಲ್ಲದೆ ಕಚೇರಿ ಖಾಲಿ ಇದೆ ಎಂದು ದೂರಿದರು.
    ಮಂಜುನಾಥ ಗೌಡ ಅವರನ್ನು ಮೆಸ್ಕಾಂ ಪ್ರಭಾರ ಎಇಇ ಎಸ್.ಎಲ್.ಲೋಹಿತ್ ಚಿಕ್ಕಮಗಳೂರಿನ ಕಚೇರಿಯಿಂದ ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾತನಾಡಿ, ಗ್ರಾಮೀಣ ಭಾಗದ ಕೆಲ ವಿದ್ಯುತ್ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಕೆಲ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳಿಸಿ ವಿದ್ಯುತ್ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
    ಇಂಥ ಭರವಸೆಗಳನ್ನು ಮಾತ್ರ ಆಗಾಗ ನೀಡುತ್ತೀರಿ. ಇನ್ನು ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಮಂಜುನಾಥ ಗೌಡ ತಿಳಿಸಿ ಧರಣಿ ಸ್ಥಗಿತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts