More

    ರಸ್ತೆ ಬದಿ ವ್ಯಾಪಾರಿಗಳಿಗೆ ಸ್ಥಳ ಗುರುತು

    ಸರಗೂರು: ರಸ್ತೆ ಬದಿ ವ್ಯಾಪಾರಿಗಳು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2-3 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಅಲ್ಲಿ ಬೀದಿ ವ್ಯಾಪಾರಿಗಳು ನಿತ್ಯ ವ್ಯಾಪಾರ ಮಾಡಬಹುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ತಿಳಿಸಿದರು.

    ಪಪಂ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳ ಜತೆಗೂಡಿ ಶನಿವಾರ ರಸ್ತೆ ಬದಿಯಲ್ಲಿನ ವ್ಯಾಪಾರವನ್ನು ಪರಿಶೀಲಿಸಿ ಮಾತಮಾಡಿದ ಅವರು, ರಸ್ತೆ ಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ವ್ಯಾಪಾರಿಗಳನ್ನು ರಸ್ತೆ ಬದಿಯಿಂದ ತೆರವು ಮಾಡಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಈ ಸಂಬಂಧ ಪಟ್ಟಣ ವ್ಯಾಪಾರ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, 2-3ಕಡೆ ಸ್ಥಳ ಗುರುತಿಸಲಾಗಿದೆ ಎಂದರು.

    2010ರ ಸಮೀಕ್ಷೆ ಪ್ರಕಾರ ಪಟ್ಟಣದಲ್ಲಿ 350 ರಸ್ತೆ ವ್ಯಾಪಾರಿಗಳಿದ್ದಾರೆ. ಇವರಲ್ಲಿ 170 ಜನರು ಆಹಾರ ವ್ಯಾಪಾರ ಮಾಡುತ್ತಿದ್ದರೆ, ಇತರರು ಬೇರೆ ಬೇರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ಕೆಇಬಿ ಕಚೇರಿ ಬಳಿ ಪುಡ್ ಕೌಂಟರ್, ಗೂಡ್ಸ್ ವಾಹನಗಳಿಗೆ ನಾಮಧಾರಿಗೌಡ ಸಮುದಾಯ ಭವನ ಬಳಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಪಾನಿಪುರಿ ಅಂಗಡಿ ಹಾಗೂ ಇತರ ವ್ಯಾಪಾರಿಗಳಿಗೆ ಸ್ಥಳ ಕಲ್ಪಿಸುವ ಸಂಬಂಧ ಅ.10ರಂದು ಸರ್ವ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿ ತಿಳಿಸಲಾಗುವುದು ಎಂದರು.

    ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಲಕ್ಷ್ಮೀಕಾಂತ್ ಮಾತನಾಡಿ, ಎಲ್ಲರ ಹಿತದೃಷ್ಟಿಯಿಂದ ಕೆಇಬಿ ಎದುರಿನ ರಸ್ತೆ ಬದಿ ವ್ಯಾಪಾರ ನಡೆಸಲು ಪಪಂ ವತಿಯಿಂದ ಸ್ಥಳ ಗುರುತಿಸಲಾಗಿದೆ. ಅಲ್ಲದೆ ಪಟ್ಟಣ ವ್ಯಾಪಾರ ಸಮಿತಿಯಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

    ಎಸ್.ಎಲ್.ರಾಜಣ್ಣ ಮಾತನಾಡಿ, ಪಟ್ಟಣ ಪಂಚಾಯಿತಿ ವತಿಯಿಂದ ಒಟ್ಟು 2 ಸ್ಥಳಗಳನ್ನು ನಾನ್ ವೆಂಡಿಂಗ್ ಜೋನ್ ಎಂದು ಗುರುತಿಸಲಾಗಿದೆ. ಹಾಗಾಗಿ ಬೇರೆಡೆ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ ಎಂದರು.

    ಪಪಂ ಸದಸ್ಯ ಚಲುವಕೃಷ್ಣ ಮಾತನಾಡಿ, ಪಟ್ಟಣವನ್ನು ಸುಂದರವಾಗಿಡಲು ಎಲ್ಲರೂ ಸಹಕರಿಸಬೇಕು. ಶಾಸಕ ಅನಿಲ್ ಚಿಕ್ಕಮಾದು ಅವರ ಸೂಚನೆ ಮೇರೆಗೆ 2 ಆಹಾರ ವಲಯವನ್ನು ಗುರುತಿಸಲಾಗಿದೆ ಎಂದರು.

    ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಉಮಾರಾಮು, ಶ್ರೀನಿವಾಸ್, ದಿವ್ಯಾ ನವೀನ್, ಚೈತ್ರಾ ಸ್ವಾಮಿ, ಎಸ್‌ಐ ನಂದೀಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts