More

    ಅತಿಥಿ ಶಿಕ್ಷಕರಿಂದ ಸರ್ಕಾರಕ್ಕೆ ರಕ್ತದಿಂದ ಪತ್ರ

    ಮಳವಳ್ಳಿ: ವಿವಿಧ ಬೇಡಿಕೆಗಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಸರ್ಕಾರಕ್ಕೆ ರಕ್ತದಿಂದ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.

    ಪಟ್ಟಣದಲ್ಲಿರುವ ಕನ್ನಡ ಭವನದಲ್ಲಿ ಸಭೆ ಸೇರಿದ್ದ ಅತಿಥಿ ಶಿಕ್ಷಕರು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ತಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಿದ ನಂತರ ಸರ್ಕಾರದ ಗಮನ ಸೆಳೆಯಲು ಸಿರಂಜ್ಗಳಿಂದ ರಕ್ತ ಸಂಗ್ರಹ ಮಾಡಿಕೊಂಡು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರಬರೆದರು.

    ತಾಲೂಕು ಅಧ್ಯಕ್ಷ ಬಿ.ಎಸ್. ಮಹೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 42 ಸಾವಿರ ಅತಿಥಿ ಶಿಕ್ಷಕರು ದಶಕಗಳಿಗೂ ಹೆಚ್ಚುಕಾಲ ಗೌರವಧನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರೇ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಅತಿಥಿ ಶಿಕ್ಷಕರ ಜೀವನ ಮಟ್ಟ ಸುಧಾರಣೆಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಮಾಜಕ್ಕೆ ಶೈಕ್ಷಣಿಕವಾಗಿ ಉತ್ತಮ ಕೊಡುಗೆ ನೀಡಲು ಶ್ರಮಿಸುತ್ತಿರುವ ಅತಿಥಿ ಶಿಕ್ಷಕರನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಾದರೂ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮದಂತೆ ಕನಿಷ್ಠ ಮಾಸಿಕ 25 ಸಾವಿರ ರೂ. ಮತ್ತು ಹನ್ನೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕೆಂದು ಇದೇ ಸಂದರ್ಭ ಆಗ್ರಹಿಸಿದರು.

    ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಖಜಾಂಚಿ ಪುಟ್ಟರಾಜು, ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ, ಸುಮಿತ್ರಾ, ವಿಷಕಂಠ ಮೂರ್ತಿ, ರೇಖಾ, ರಾಧಾ, ರಮ್ಯಾ, ಹನುಮಂತಪ್ಪ, ಹನುಮಯ್ಯ, ಬಿಲ್ಲಯ್ಯ ಸ್ವಾಮಿ, ಮಹದೇವ ಸ್ವಾಮಿ, ಮಹದೇವು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts