More

    ಹುಳಿಯಾರಿನ ಪೇದೆ ಸುಧಾ ಕೊಲೆ ಹಿಂದಿದೆ ತ್ರಿಕೋನ ಪ್ರೇಮ! ಓರ್ವ ಪೊಲೀಸಪ್ಪನನ್ನು ಪ್ರೀತಿಸುತ್ತಿದ್ದ ಇಬ್ಬರು ಮಹಿಳಾ ಪೇದೆಗಳು

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪೊಲೀಸ್​ ಠಾಣೆಯ ಮಹಿಳಾ​ ಪೇದೆ ಸುಧಾರ ಕೊಲೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಮಹಿಳಾ ಪೇದೆ ರಾಣಿ ಎಂಬಾಕೆಯೇ ಸುಧಾರ ಕೊಲೆಗೆ ಸುಪಾರಿ ಕೊಟ್ಟದ್ದು ಎಂಬ ಆಘಾತಕಾರಿ ವಿಚಾರದ ಜತೆಗೆ ತ್ರಿಕೋನ ಪ್ರೇಮ ಪ್ರಕರಣವೂ ಹೊರ ಬಂದಿದೆ.

    ಸುಧಾ ಹಾಗೂ ರಾಣಿ ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬ ಪೊಲೀಸ್​ನನ್ನು ಪ್ರೀತಿಸುತ್ತಿದ್ದು, ಈ ತ್ರಿಕೋನ ಪ್ರೀತಿಯೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ವಿಚಾರಕ್ಕೆ ಕಳೆದ ಆರೇಳು ತಿಂಗಳಿಂದ ಸುಧಾ ಮತ್ತು ರಾಣಿ ನಡುವೆ ಗಲಾಟೆ ನಡೆದಿತ್ತಂತೆ. ಸುಧಾಳನ್ನ ಮುಗಿಸಿದರೆ ಪ್ರಿಯಕರ ತನಗೇ ಸಿಗುತ್ತಾನೆ ಅಂದುಕೊಂಡು ಆಕೆಯನ್ನು ರಾಣಿ ಕೊಲೆ ಮಾಡಿಸಿದ್ದಾಳೆ ಎನ್ನುವ ಅಂಶ ಬಯಲಾಗಿದೆ.

    ಏನಿದು ಪ್ರಕರಣ?: ಸೆ.13ರಂದು ನಾಪತ್ತೆಯಾದ ಹುಳಿಯಾರು ಠಾಣೆಯ ಪೇದೆ ಎಸ್​.ಸುಧಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿತ್ತು. ಸೆ.16ರಂದು ಶಿವಮೊಗ್ಗ ನಗರದ ಲಾಡ್ಜ್​ವೊಂದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶವವಾಗಿ ಪತ್ತೆಯಾಗಿದ್ದ. ಈತ ಹುಳಿಯಾರು ಪೊಲೀಸ್​ ಠಾಣೆಯ ಪೇದೆ ಸುಧಾ ಅವರ ಚಿಕ್ಕಮ್ಮನ ಮಗ. ಸೆ.13ರಂದು ಸುಧಾ ಮತ್ತು ಮಂಜುನಾಥ್​ ಚಿಕ್ಕನಾಯಕನಹಳ್ಳಿಯಿಂದ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಅಂದು ರಾತ್ರಿ 8.40ರಿಂದ ಇಬ್ಬರ ಫೋನ್ ಸಂಪರ್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸುಧಾಗಾಗಿ ಹುಡುಕಾಟ ನಡೆಯುತ್ತಿತ್ತು. ಅತ್ತ ಶಿವಮೊಗ್ಗದ ಲಾಡ್ಜ್​​ಗೆ ಆಗಮಿಸಿದ್ದ ಮಂಜುನಾಥ್​, ರೂಮಿನಿಂದ ಹೊರ ಬಂದಿರಲಿಲ್ಲ. ಅನುಮಾನಗೊಂಡು ಸೆ.16ರ ಸಂಜೆ ಬಾಗಿಲು ತೆಗೆದಾಗ ಮಂಜುನಾಥ್​ ಶವ ಪತ್ತೆಯಾಗಿತ್ತು. ಅಲ್ಲಿ ಡೆತ್​ನೋಟ್​ ಕೂಡ ಸಿಕ್ಕಿತ್ತು. ‘ನನ್ನ ದೊಡ್ಡಮ್ಮನ ಮಗಳಾದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದೇನೆ’ ಎಂದು ಡೆತ್‌ನೋಟ್ ಬರೆದಿಟ್ಟಿದ್ದ. ಈ ಪ್ರಕರಣ ಸುಧಾ ಅವರ ಮನೆಯಲ್ಲಿ ಆತಂಕ ಸೃಷ್ಟಿಸಿತ್ತು. ಇದಾದ ಮರುದಿನ ಅಂದರೆ ಸೆ.17ರಂದು ಅರಸೀಕೆರೆ ತಾಲೂಕಿನ ತಿಪಟೂರು&ಅರಸೀಕೆರೆ ಎನ್​ಎಚ್​-206ರ ಮೈಲನಹಳ್ಳಿ ಬಳಿಯ ಪೊದೆಯಲ್ಲಿ ಸುಧಾ ಮೃತದೇಹ ಪತ್ತೆಯಾಗಿತ್ತು.

    ಈ ನಾಪತ್ತೆ ಪ್ರಕರಣದ ಬೆನ್ನತ್ತಿದ ಪೊಲೀಸರು ಮೊಬೈಲ್​ ಕರೆಗಳನ್ನು ಪರಿಶೀಲಿಸಿದಾಗ ಶಾಕ್​ ಕಾದಿತ್ತು. ಸಹದ್ಯೋಗಿ ಪೇದೆ ರಾಣಿಯೇ ಈ ಕೊಲೆಯ ಸೂತ್ರಧಾರಿ ಎಂಬುದು ಬೆಳಕಿಗೆ ಬಂದಿದೆ. ಪಿಎಫ್​ ಹಣದ ವಿಚಾರವಾಗಿ ನನಗೆ ಸುಧಾ ಅವಮಾನ ಮಾಡಿದ್ದಾಳೆ ಎಂದು ಮಂಜುನಾಥ್​ ಹಾಗೂ ಈತನ ಸ್ನೇಹಿತ, ಕಾರು ಚಾಲಕ ನಿಖೇಶ್​ರನ್ನು ಪುಸಲಾಯಿಸಿ ಆಕೆಯ ಕೊಲೆಗೆ ಸೂಚನೆ ಕೊಟ್ಟಿದ್ದಾಗಿ ಪೊಲೀಸರ ಮುಂದೆ ರಾಣಿ ಬಾಯಿಬಿಟ್ಟಿದ್ದಾಳೆ. ಆದರೆ, ಸುಧಾ ಹಾಗೂ ರಾಣಿ ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬ ಪೊಲೀಸ್​ನನ್ನು ಪ್ರೀತಿಸುತ್ತಿದ್ದು, ಈ ತ್ರಿಕೋನ ಪ್ರೀತಿಯೇ ಕೊಲೆಗೆ ಕಾರಣ ಎನ್ನಲಾಗಿದೆ. ಆರೋಪಿಗಳಾದ ನಿಖೇಶ್​ ಮತ್ತು ಎಸ್​.ರಾಣಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಣಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಮೊದಲ ಬಾರಿಗೆ ಹಾಕಿದ್ದ ಸ್ಕೆಚ್​ ಮಿಸ್​: ರಾಣಿ ಕೊಟ್ಟ ಸೂಚನೆಯಂತೆ ಸುಧಾ ಸಹೋದರ ಸಂಬಂಧಿ ಮಂಜುನಾಥ್​ ಹಾಗೂ ಆತನ ಸ್ನೇಹಿತ ನಿಖೇಶ್​ ಸೆ.4 ರಂದು ಮೊದಲ ಬಾರಿ ಸುಧಾಳನ್ನು ಮುಗಿಸಲು ಹಾಕಿದ್ದ ಸ್ಕೆಚ್​ ಮಿಸ್ಸಾಗಿತ್ತು. ಶಿವಮೊಗ್ಗದ ಸಾಗರದ ಆಶ್ರಮವೊಂದರಲ್ಲಿ ಓದುತ್ತಿದ್ದ ಮಗನನ್ನು ನೋಡಿಕೊಂಡು ಬರಲು ಮಗಳು ಹಾಗೂ ಸಂಬಂಧಿಕರ ಮಗಳ ಜತೆ ಸುಧಾ ಅವರು ನಿಖೇಶ್​ ಜತೆ ಕಾರಿನಲ್ಲಿ ಹೊರಟಿದ್ದು, ಈ ವೇಳೆ ಕೊಲೆಗೆ ಸ್ಕೆಚ್​ ಹಾಕಿದ್ದರು. ಸುಧಾ ಮಕ್ಕಳಿಬ್ಬರು ಹಾಗೂ ತಾಯಿ ಜತೆಯಲ್ಲಿದ್ದರಿಂದ ಈ ಪ್ರಯತ್ನ ಕೈಬಿಟ್ಟಿದ್ದರು. ಸೆ.13ರಂದು ಸುಧಾರ ಕೊಲೆಗೆ ರಾಣಿ ಮತ್ತೊಂದು ಪ್ಲಾನ್​ ಕೊಟ್ಟಿದ್ದಳು. ಅದರಂತೆ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ನಿಖೇಶ್​, ಸುಧಾಳನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾನೆ. ತಿಪಟೂರಿನ ಹಾಸನ ಸರ್ಕಲ್​ ಬಳಿ ಮಂಜುನಾಥ್​ ಸಹ ಕಾರು ಹತ್ತಿಕೊಂಡು ಸುಧಾ ಕಣ್ಣಿಗೆ ಸ್ಪ್ರೇ ಮಾಡಿ ಎದೆಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ನಂತರ ವೇಲ್​ನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದು ಮಾರ್ಗಮಧ್ಯೆ ಎಸೆದು ತಲೆಮರೆಸಿಕೊಂಡಿದ್ದರು. ಅಕ್ಕನನ್ನು ಕೊಂದು ಮಂಜುನಾಥ್​ ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.

    ಹುಳಿಯಾರು ಠಾಣೆ ಮಹಿಳಾ ಪೇದೆ ರಾಣಿಗೆ ಕೊಲೆಯ ಮಾಹಿತಿ ಇದ್ದು ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ನಿಖೇಶ್​ನನ್ನೂ ಬಂಧಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
    | ರಾಹುಲ್​ಕುಮಾರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

    ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

    ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ! ಸಾಗರದಲ್ಲಿ ಅಪರೂಪದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts