More

    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಹಿಜಾಬ್- ಕೇಸರಿ ಶಾಲು ಸಂಘರ್ಷ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

    ಶಿವಮೊಗ್ಗ: ರಾಜ್ಯದ ವಿವಿಧೆಡೆ ಸದ್ದು ಮಾಡುತ್ತಿರುವ ಹಿಜಾಬ್ ವಿವಾದ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಹಾಗೂ ದಶಕಗಳ ಇತಿಹಾಸವಿರುವ ಸಹ್ಯಾದ್ರಿ ಕಾಲೇಜಿನಲ್ಲಿ ಸೋಮವಾರ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಆರಂಭವಾಗಿದೆ.

    ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಖಾ ತೆಗೆದಿರಿಸಿ ತರಗತಿಗೆ ಪ್ರವೇಶಿಸಬೇಕು. ಇಲ್ಲವೇ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ನಮಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿ ಪದವಿ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಅತ್ತ ವಿದ್ಯಾರ್ಥಿನಿಯ ಪಾಲಕರೊಬ್ಬರು ಕಾಲೇಜಿಗೆ ಬಂದು ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೂ ಪರವಾಗಿಲ್ಲ. ಕರೊನಾದಿಂದ ಈಗಾಗಲೇ ಎರಡು ವರ್ಷ ನಷ್ಟವಾಗಿದೆ. ಹೀಗಾಗಿ ನನ್ನ ಮಗಳು ಹಿಜಾಬ್ ತೆಗೆದಿರಿಸಿ ಕಾಲೇಜಿಗೆ ಹಾಜರಾಗುತ್ತಾಳೆ ಎಂದು ಹೇಳಿದರು. ಇನ್ನೊಂದೆಡೆ ಕೆಲವು ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡದೇ ಇದ್ದರೆ ನಾವು ತರಗತಿಗೆ ಬರುವುದಿಲ್ಲ ಎಂದು ಕಾಲೇಜಿನಿಂದ ಹೊರ ನಡೆದರು.

    ವಸ್ತ್ರ ಸಂಹಿತೆ ಪಾಲನೆ ಆಗಬೇಕು: ಕರೊನಾ ಹಾಗೂ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ಅನೇಕ ವಿದ್ಯಾರ್ಥಿನಿಯರು ಸಮವಸ್ತ್ರ ಪಡೆದುಕೊಂಡಿರಲಿಲ್ಲ. ಈಗ ಎಲ್ಲರಿಗೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಪ್ರವೇಶಿಸಬೇಕು ಎಂದು ಪ್ರಾಚಾರ್ಯೆ ಪ್ರೊ.ವೀಣಾ ತಿಳಿಸಿದರು.

    ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ತೆಗೆದಿರಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿ ಅವುಗಳನ್ನು ತೆಗೆದಿರಿಸಿ ತರಗತಿಯೊಳಕ್ಕೆ ಬರಬೇಕು. ಇಷ್ಟರ ನಡುವೆ ನಮಗೆ ಕುವೆಂಪು ವಿವಿಯಿಂದ ಹಿಜಾಬ್ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಡುವೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮನವೊಲಿಕೆಯಲ್ಲಿ ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರು ನಿರತರಾಗಿದ್ದಾರೆ.

    ಕುಂದಾಪುರದಲ್ಲಿ ತಣ್ಣಗಾಗದ ವಿವಾದ: ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts