More

    ದಾಖಲೆಗಳ ಲೋಪ ಸರಿಪಡಿಸಿಕೊಳ್ಳಲು ಉತ್ತಮ ಅವಕಾಶ

    ಶ್ರವಣಬೆಳಗೊಳ: ಜನರು ಕಂದಾಯ ದಾಖಲೆಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ಕಂದಾಯ ಅದಾಲತ್ ಉತ್ತಮ ಕಾರ್ಯಕ್ರಮವಾಗಿದ್ದು, ಇದನ್ನು ಎಲ್ಲ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಜೆ.ಗೀತಾ ಹೇಳಿದರು.

    ಶ್ರವಣಬೆಳಗೊಳ ನಾಡಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಕಂದಾಯ ಇಲಾಖೆ ಮೂಲಕ ಜನತಾ ದರ್ಶನ, ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮಗಳಂತೆ, ತಹಸೀಲ್ದಾರ್ ಅವರಿಗೆ ವಿಶೇಷ ಅಧಿಕಾರ ನೀಡಿ ಸ್ಥಳದಲ್ಲೇ ಪಹಣಿಯಲ್ಲಿನ ಲೋಪದೋಷಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಅದಾಲತ್ ಕಾರ್ಯಕ್ರಮ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತಿ ತಿಂಗಳ ಮೂರನೇ ಶನಿವಾರ ತಾಲೂಕು ಕಚೇರಿ ಹಾಗೂ ಎಲ್ಲ ನಾಡಕಚೇರಿಗಳಲ್ಲಿ ಪಿಂಚಣಿ ಅದಾಲತ್ ಮಾಡಲಾಗುತ್ತಿದ್ದು, ಸ್ಥಳದಲ್ಲೇ ದಾಖಲೆಗಳನ್ನು ಪರಿಶೀಲಿಸಿ ಅಲ್ಲೇ ಮಂಜೂರಾತಿ ನೀಡಲಾಗುವುದು ಎಂದರು.

    ಹಿಡುವಳಿ ಜಮೀನುಗಳ ಜವಾಬ್ದಾರಿ ಆಯಾ ರೈತರದ್ದೇ ಆಗಿದ್ದು, 6 ತಿಂಗಳಿಗೆ ಒಮ್ಮೆಯಾದರೂ ಹೊಸ ಪಹಣಿ ಪಡೆದು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಅದಾಲತ್‌ನಲ್ಲಿ 148 ಪೌತಿ ಖಾತೆ, 30 ಪಹಣಿ ತಿದ್ದುಪಡಿ, 40 ವಿವಿಧ ಮಾಸಾಶನ ಫಲಾನುಭವಿಗಳು ಸೇರಿ ಒಟ್ಟು 218 ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಲೋಕೇಶ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಲಲ್ಲುಪ್ರಸಾದ್, ಉಪ ತಹಸೀಲ್ದಾರ್ ದೇವರಾಜ್, ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್, ಶಿರಸ್ತೇದಾರ್ ಪವನ್‌ಕುಮಾರ್, ಸರ್ವೇ ಮೇಲ್ವಿಚಾರಕ ಶಿವಶಂಕರ್, ಮುಖಂಡ ಪರಮ ದೇವರಾಜೇಗೌಡ, ತಮ್ಮಣ್ಣಗೌಡ, ಸಾಗರ್, ಸಿ.ಎನ್.ಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಆರ್.ವಾಸು, ಭಾರತಿ ಚಂದ್ರೇಗೌಡ, ಚಂದ್ರು, ಅಶೋಕ್ ಹಾಗೂ ಎಲ್ಲ ವೃತ್ತಗಳ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts