More

    ವಿಜಯೇಂದ್ರ ನೇತೃತ್ವದಲ್ಲಿ ಉಚಿತ ನೋಟ್‌ಬುಕ್

    ಶಿಕಾರಿಪುರ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ ಮತ್ತು ಸಂಸ್ಕಾರದಿಂದ ಸದೃಢ ದೇಶ ನಿರ್ಮಿಸಲು ಸಾಧ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಎಂವೈ (ಮೈತ್ರಾದೇವಿ ಯಡಿಯೂರಪ್ಪ) ಸೇವಾ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಯಶಸ್ಸಿಗಾಗಿ ನಿರಂತರ ಹೋರಾಟ ನಡೆಸಬೇಕು ಎಂದರು.
    ಉನ್ನತ ಗುರಿಯೊಂದಿಗೆ ಕಾರ್ಯಪ್ರವೃತ್ತರಾದಾಗ ಸಾಧನೆ ಮಾಡಬಹುದು. ಶಿಕ್ಷಣ ಸಾಧನೆ ಯಶಸ್ಸಿನ ಬುನಾದಿ. ಗುರಿ ಮುಟ್ಟುವವರೆಗೆ ವಿರಮಿಸಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ದೇಶದ ಆಸ್ತಿ ಮತ್ತು ಬೆಳಕು. ನಿಮ್ಮ ಸಾಧನೆಯಿಂದ ನೀವು ಒಬ್ಬ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ನಮ್ಮ ನಿರೀಕ್ಷೆ ಮತ್ತು ಗುರಿಯನ್ನು ನಾವು ತಲುಪಬೇಕು ಎಂದು ಹೇಳಿದರು.
    ಟ್ರಸ್ಟ್‌ನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8,9,10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಅವಶ್ಯಕ ಪುಸ್ತಕಗಳನ್ನು ನೀಡಲಾಗುವುದು. ಎಸ್‌ಎಸ್‌ಎಲ್ಸಿ ಯಲ್ಲಿ ಟಾಪ್ 3 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವದು ಎಂದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಇಂತಹ ವೇದಿಕೆಗಳು ನಮ್ಮ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಆಗಬಲ್ಲವು. ವಿಜಯೇಂದ್ರ ಅವರ ಕನಸಿನ ಕೂಸು ಎಂವೈ ಸೇವಾ ಟ್ರಸ್ಟ್. ಇದರ ಮೂಲಕ ಯಾವುದೇ ಜಾತಿ, ಮತ, ಪಂಥ, ಧರ್ಮದ ಭೇಧವಿಲ್ಲದೇ ಎಲ್ಲ ಮಕ್ಕಳಿಗೂ ಉಚಿತ ಪುಸ್ತಕಗಳನ್ನು ನೀಡಲಾಗುತ್ತಿದೆ. ಇದೊಂದು ಸಾಮಾಜಿಕ ಕಳಕಳಿಯ ಸಮಾಜಮುಖಿ ಕಾಯಕ ಎಂದರು.
    ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಬಿಇಒ ಜಿ.ಎಸ್.ಶಶಿಧರ್, ಉಪನ್ಯಾಸಕ ಸುಧೀರ್ ಮಾರವಳ್ಳಿ, ಎಂವೈ ಟ್ರಸ್ಟ್ ಕಾರ್ಯದರ್ಶಿ ಸಂದೀಪ್ ಪಾಟೀಲ್, ಬೆಂಗಳೂರಿನ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಇತರರಿದ್ದರು. ಪವಾಡಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅವರು ಮೂಢನಂಬಿಕೆಯಿಂದ ವೈಜ್ಞಾನಿಕ ಪಥದೆಡೆಗೆ ಎಂಬ ಕಾರ್ಯಕ್ರಮದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts