More

    ಸಾರ್ವಜನಿಕರಿಂದ ದೂರುಗಳ ಸುರಿಮಳೆ

    ಕೊಳ್ಳೇಗಾಲ: ನನೆಗುದ್ದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ, ಗಾಂಜಾ ಮಾರಾಟ, ಅಂಗನವಾಡಿ ಅಕ್ರಮ, ಸ್ಕ್ಯಾನಿಂಗ್ ದಂಧೆ, ಅಕ್ರಮ ಮದ್ಯ , ಬಾರ್ ತೆರವು, ಇ-ಸ್ವತ್ತು, ಕುಡಿಯುವ ನೀರು, ಬೀದಿ ದೀಪಗಳು, ಅನೈರ್ಮಲ್ಯ, ಸ್ಮಶಾನ ಇತರೆ ವಿಚಾರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸದ್ದು ಮಾಡಿದವು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮುಂದೆ ಸಾರ್ವಜನಿಕರು ದೂರುಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ನಂತರ ಮಾತನಾಡಿದ ಶಾಸಕರು, ನಗರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರ್‌ಒ ಪ್ಲಾಂಟ್‌ನಲ್ಲಿ 5 ರೂಪಾಯಿಗೆ 20 ಲೀಟರ್ ಕೊಡುವಂತೆ ಕ್ರಮವಹಿಸಿ, ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚು ಬರುವುದು. ನನಗೆ ಬಹಳ ದೂರು ಬಂದಿದೆ. ವ್ಯೆದ್ಯರು ಜನರಿಗೆ ಉತ್ತಮ ಸೇವೆ ನೀಡಿ. ನಿಮ್ಮನ್ನು ದೇವರು ಎಂದು ಪೂಜಿಸುತ್ತಾರೆ. ಮುಂದೆ ದೂರು ಬಾರದಂತೆ ಕ್ರಮವಹಿಸಿ ಇಲ್ಲವೇ ಕ್ರಮ ವಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಡಾ.ಅಂಬೇಡ್ಕರ್ ಸಮುದಾಯ ಭವನ ಸ್ಥಳ ವಿಶಾಲವಾಗಿದೆ. ಹಿಂದಿನ ಡಿಸಿ ರಮೇಶ್ ಪೌರಕಾರ್ಮಿಕರ ಕಾಲನಿ ಕಡೆಗೆ 30 ಅಡಿ ರಸ್ತೆ ಬಿಡಬೇಕೆಂದು ಆದೇಶ ಮಾಡಿದ್ದಾರೆ. ಅದರಂತೆ ಕೆಲಸ ಮಾಡಿ ಎಂದು ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ ಅವರಿಗೆ ಸೂಚನೆ ನೀಡಿದರು. ಈಗಾಗಲೇ ಭವನ ನಿರ್ಮಾಣ ಕಾಮಗಾರಿ ಶುರುವಾಗಿ 21 ವರ್ಷಗಳೇ ಕಳೆದಿವೆ. ಹಿಂದೆ ನಾನೇ 1 ಕೋಟಿ ರೂ. ಅನುದಾನವನ್ನು ಕೊಡಿಸಿದ್ದೇನೆ. ಇನ್ನು ಮುಗಿದಿಲ್ಲ ಸಮುದಾಯ ಯಜಮಾನರು ಹಾಗೂ ಮುಖಂಡರು ಮುತುವರ್ಜಿ ವಹಿಸಿ ಪೂರ್ಣಗೊಳಿಸಲು ಸಹಕರಿಸಿ ರಸ್ತೆ ಎಲ್ಲರ ಉಪಯೋಗಕ್ಕೆ ಬರುತ್ತದೆ. ಅಧಿಕಾರಿಗಳು ಕಾನೂನಿನಂತೆ ಕೆಲಸ ಮಾಡಿ, ಇಲ್ಲವೇ ನೀವೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಸ್ಕ್ಯಾನಿಂಗ್ ಕಮಿಷನ್ ದಂಧೆ: ಕರವೇ ಸಂಚಾಲಕ ಮಂಜುನಾಥ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರು. ಕರವೇ ಸಂಚಾಲಕ ನಂದ ಹಾಗೂ ಮುಖಂಡ ನಿಂಗರಾಜು ಶಂಕನಪುರ ಮಾತನಾಡಿ, ಸರ್ಕಾರಿ ವ್ಯೆದರು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸುವಂತೆ ಶಿಫಾರಸ್ಸು ಮಾಡುತ್ತಾರೆ. ಅದರಂತೆ ಸ್ಕ್ಯಾನಿಂಗ್ ಸೆಂಟರ್‌ನವರು ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಕೈ ಬರಹದ ಬಿಲ್ ಕೊಡುತ್ತಾರೆ ಎಂದು ಆರೋಪಿಸಿದರು.

    ಟಿಎಚ್‌ಒ ಗೋಪಾಲ್ ಮಾತನಾಡಿ, ನಮ್ಮಲ್ಲಿ ಸ್ಕ್ಯಾನಿಂಗ್ ಮಿಷನ್ ಇದೆ. ಆದರೆ, ರೇಡಿಯೋಲಾಜಿಸ್ಟ್ ಪೋಸ್ಟ್ ಇಲ್ಲ ಎಂದು ಉತ್ತರಿಸಿದರು. ನಗರಸಭೆ ಸದಸ್ಯ ಬಸ್ತೀಪುರ ಶಾಂತರಾಜು ಮಾತನಾಡಿ, ಸರ್ಕಾರಿ ವ್ಯೆದರಿಗೆ ಖಾಸಗಿ ಸೆಂಟರ್‌ಗಳು ಶೇ.30ರಷ್ಟು ಕಮಿಷನ್ ನೀಡುತ್ತಿವೆ ಎಂದು ಗಭೀರವಾಗಿ ಆರೋಪಿಸಿದರು. ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಆಸ್ಪತ್ರೆಯ ಮುಂದೆ ಎಸ್ಸಿ-ಎಸ್ಟಿಗಳಿಗೆ ಏನೆಲ್ಲಾ ಆರೋಗ್ಯ ಸೇವೆ ಉಚಿತವಾಗಿದೆ ಎಂದು ನಾಮಫಲಕ ಅಳವಡಿಸಿಲ್ಲ ಎಂದರು. ಆರೋಗ್ಯ ಸೌಲಭ್ಯಗಳ ಮಾಹಿತಿಯನ್ನು ಅಳವಡಿಸುವಂತೆ ಎ.ಆರ್.ಕೃಷ್ಣಮೂರ್ತಿ ಟಿಎಚ್‌ಒಗೆ ಸೂಚನೆ ನೀಡಿದರು.

    ಮಾಹಿತಿ ನೀಡಿಲ್ಲ: ಭೀಮನಗರದ ಮುಖಂಡ ಸಿದ್ದಪ್ಪ ಮಾತನಾಡಿ, ಅಂಬೇಡ್ಕರ್ ಭವನದ ವಿಚಾರವಾಗಿ ಪೌರಕಾರ್ಮಿಕರ ಕಾಲನಿ ಕಡೆಗೆ 30 ಅಡಿ ಜಾಗ ಬಿಡಲು ಡಿಸಿ ಏಕಾಏಕಿ ಆದೇಶ ಮಾಡಿದ್ದಾರೆ. ಭವನಕ್ಕೆ ಸಂಬಂಧಿಸಿದವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು. ನಟರಾಜು ಮಾಳಿಗೆ ಮಾತನಾಡಿ, ಪೌರಕಾರ್ಮಿಕರು ನಮ್ಮವರೆ ಡಿಸಿ ಅವರು ರಸ್ತೆ ಬಿಡುವ ವಿಚಾರವಾಗಿ ಸಂಬಂಧಿಸಿದವರಿಗೆ ತಿಳಿಸಿದ್ದರೆ ಸಮಸ್ಯೆ ಆಗುತ್ತಿರಲ್ಲಿಲ್ಲ ಆದರೀಗ ಆದೇಶ ಮಾಡಿದ್ದಾರೆ. ಅದರಂತೆ ಕೆಲಸವಾಗಲಿ ಬೇಗ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಿ ಎಂದು ಶಾಸಕರಿಗೆ ಮನವಿ ಮಾಡಿದರು. ಅಲ್ಲದೇ ಭವನ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ತನಿಖೆ ಮಾಡಿ ಎಂದು ಆಗ್ರಹಿಸಿದರು. ಮುಖಂಡ ದಿಲೀಪ್ ಸಿದ್ದಪ್ಪಾಜಿ , ರಾಜಶೇಖರ್ ಸಮ್ಮತಿಸಿದರು.

    ಪ್ರತಿಧ್ವನಿಸಿದ ವಿಜಯವಾಣಿ ವರದಿ: ಪ್ರಗತಿಪರ ಒಕ್ಕೂಟದ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಸರ್ಕಾರ ನೀಡುವ ಹಾಲಿನ ಪುಡಿ ಕಾಳಸಂತೆಯಲ್ಲಿ ಮಾರಾಟ ಆಗುತ್ತದೆ. ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅಧಿಕಾರಿಗಳ ಬೆಂಬಲವಿಲ್ಲದೆ ಹೇಗೆ ಹಾಲಿನ ಪೌಂಡರ್ ಬೇರೆಡೆ ಮಾರಾಟವಾಗುತ್ತಿದೆ ಎಂದು ಪ್ರಶ್ನಿಸಿದರು. ಡಿಎಸ್‌ಎಸ್ ನಿಂಗರಾಜು ಅಣಗಳ್ಳಿ ಮಾತನಾಡಿ, ಅಂಗನವಾಡಿಯಲ್ಲಿ ಮಕ್ಕಳಿಗೆ ಗುಣಮಟದ್ಟ ಆಹಾರ ನೀಡುತ್ತಿಲ್ಲ. 1 ಮೊಟ್ಟೆಯನ್ನು 4 ಭಾಗ ಮಾಡಿ ಕೊಡುತ್ತಾರೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಸ್ಥಳದಲ್ಲಿದ್ದ ಸಿಡಿಪಿಒ ನಂಜಮಣಿ ಅವರಿಗೆ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸುವಂತೆ ತಾಕೀತು ಮಾಡಿದರು. ಅಲ್ಲದೆ ಇಂತಹ ಅಕ್ರಮಗಳನ್ನು ಜನರು ಹಿಡಿದು ಪೊಲೀಸರಿಗೆ ನೀಡಿ ಎಂದು ಸಲಹೆ ನೀಡಿದರು. ಮದ್ಯ ಅಕ್ರಮ ಮಾರಾಟ ಹಾಗೂ ಗಾಂಜಾ ಮಾರಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದರು.

    ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ಡಿವೈಎಸ್‌ಪಿ ಜಿ.ಯು. ಸೋಮೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ್, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಮುಂಖಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts