More

    ಕಾಫಿ ಬೆಳೆದು ಸೈ ಎನಿಸಿಕೊಂಡ ರೈತ

    ಎಚ್.ಡಿ.ಕೋಟೆ: ಮಲೆನಾಡು ಅಲ್ಲದೆ ಹರೆ ಮಲೆನಾಡಿನಲ್ಲೂ ಕಾಫಿ ಬೆಳೆ ಬೆಳೆಯಬಹುದು ಎಂದು ಸಾಧಿಸಿ ತೋರಿಸುವ ಮೂಲಕ ರೈತನೊಬ್ಬ ತಾಲೂಕಿಗೆ ಮಾದರಿಯಾಗಿದ್ದಾನೆ.

    ಯಾವುದೇ ರೀತಿಯ ಗೊಬ್ಬರ (ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ, ರಸಾಯನಿಕ ಗೊಬ್ಬರ) ಬಳಸದೆ ಗಿಡದಲ್ಲಿ ಉದುರಿದ ಎಲೆಯನ್ನು ಕೊಳೆಸಿ ಕಸಮಾಡಿ ಅದರಲ್ಲಿ ಉತ್ತಮ ರೀತಿಯಲ್ಲಿ ಗುಣಮಟ್ಟದ ಕಾಫಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.

    ಹೌದು ತಾಲೂಕಿನ ಚಾಮಹಳ್ಳಿ ಗ್ರಾಮದ ರೈತ ಸಿ.ಎನ್.ಸೋಮೇಶ ಓದಿದ್ದು ಎಂಟನೇ ತರಗತಿಯಾದರೂ ಕೃಷಿಯಲ್ಲಿ ದೊಡ್ಡ ಪಾಂಡಿತ್ಯವನ್ನು ಪಡೆದು ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನಿನಲ್ಲಿ ಕಾಫಿ, ಅಡಿಕೆ, ತೆಂಗು ಸೇರಿದಂತೆ ಇತರ ಲಾಭದಾಯಕ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ.

    ಏಳು ವರ್ಷದ ಹಿಂದೆ ತೆಂಗಿನ ತರಳು ತಂದು 120 ತೆಂಗಿನ ಗಿಡ ನಾಟಿ ಮಾಡಿದ್ದು, ಎರಡು ವರ್ಷದಿಂದ ಫಲ ನೀಡುತ್ತಿದೆ. ತಿಂಗಳಿಗೆ 20,000 ರೂ.ವರೆಗೆ ಎಳನೀರು ಮಾರಟ ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಭದ್ರಾವತಿಯಿಂದ ಒಂದೂವರೆ ಸಾವಿರ ಅಡಕೆ ಗಿಡ ತಂದು ಸುಮಾರು ಎರಡೂವರೆ ಎಕರೆಗೆ ತೆಂಗಿನ ಮರಗಳ ನಡುವೆ ನಾಟಿ ಮಾಡಿದ್ದಾರೆ. ಇದೀಗ ಅಡಕೆಯೂ ಫಲ ನೀಡುತ್ತಿದ್ದು ವರ್ಷಕ್ಕೆ 2.5 ಲಕ್ಷ ರೂ. ಗಳಿಸುತ್ತಿದ್ದಾರೆ. ಅಂತೆಯೆ ಎರಡೂವರೆ ವರ್ಷದ ಹಿಂದೆ ಬೇಲೂರಿನಿಂದ ಒಂದೂವರೆ ಸಾವಿರ ಕಾಫಿ ಗಿಡಗಳನ್ನು ತಂದು ನಾಟಿ ಮಾಡಿದ್ದು, ಇದೀಗ ಅದೂ ಫಲ ನೀಡುತ್ತಿದೆ. ಈಗಾಗಲೇ ಐದು ಕ್ವಿಂಟಾಲ್ ಅಡಕೆ ಕಟಾವು ಮಾಡಿದ್ದು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆಗೆ 18,000 ರೂ. ಇದ್ದು, ಆದಾಯದ ನಿರೀಕ್ಷೆಯಲ್ಲಿದ್ದಾರೆ.

    ಹತ್ತು ವರ್ಷಗಳ ಹಿಂದೆ ಪಿತ್ರಾರ್ಜಿತವಾಗಿ ಮೂರು ಎಕ್ಕರೆ ಜಮೀನು ಪ್ರಾರಂಭದಲ್ಲಿ ಕಾಡಿನಂತಿತ್ತು. ಬೋರ್‌ವೆಲ್ ಕೊರೆಸಿ ತೆಂಗಿನ ಗಿಡ ನೆಡಲು ಪ್ರಾರಂಭ ಮಾಡಿದಾಗ ಅಕ್ಕಪಕ್ಕದ ರೈತರು ಕಿಚಾಯಿಸಿದ್ದರು. ಆದರೂ ಸಹ ಯಾರ ಮಾತಿಗೂ ತಲೆಕೊಡಿಸಿಕೊಳ್ಳದೆ ಹಂತಹಂತವಾಗಿ ಅಡಕೆ, ಕಾಫಿ ಗಿಡ ಹಾಕಿದೆ. ಈಗ ಮೂರು ಎಕರೆ ಪ್ರದೇಶದಲ್ಲಿ ಮಿಶ್ರ ಬೇಸಾಯ ಮಾಡುತ್ತಿದ್ದು, ವರ್ಷಕ್ಕೆ ಆರರಿಂದ ಏಳು ಲಕ್ಷ ರೂ.ಆದಾಯ ಪಡೆಯುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

    ಗೊಬ್ಬರ ಬಳಕೆ ಇಲ್ಲ: ಕಾಡಿನಂತಿದ್ದ ಜಮೀನಿಗೆ ಯಾವುದೇ ರೀತಿಯ ಗೊಬ್ಬರ, ಔಷಧ ಬಳಸದೆ ಮೂರು ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಮೊದಲ ವರ್ಷದಲ್ಲಿ 4.5 ಲಕ್ಷ ರೂ. ಆದಾಯ ಪಡೆದು ಶೂನ್ಯ ಬಂಡವಾಳದಲ್ಲಿ ಅಧಿಕ ಲಾಭ ಪಡೆದ ಹೆಗ್ಗಳಿಕೆ ಇವರದ್ದು. ಬಾಳೆ ಫಸಲು ಪಡೆದ ನಂತರ ಅದರ ಗಿಡಗಳನ್ನು ನಾಶ ಮಾಡದೆ ಭೂಮಿಯಲ್ಲಿ ಕೊಳೆಯುವಂತೆ ಮಾಡಿದ್ದು, ತೆಂಗು, ಅಡಕೆ, ಕಾಫಿ ಗಿಡ ಬೆಳೆಸಿದ್ದಾರೆ. ಯಾವುದೇ ಅನುಪಯುಕ್ತ ಗಿಡಗಳನ್ನು ನಾಶ ಮಾಡದೆ ಟಿಲ್ಲರ್ ಮೂಲಕ ಉಳುಮೆ ಮಾಡಿ ಭೂಮಿಯಲ್ಲಿ ಗಿಡಗಳನ್ನು ಕೊಳೆಸಿ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದಲ್ಲದೆ ತೆಂಗಿನ ಗರಿ, ಅಡಕೆ ಗರಿಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿ ಭೂಮಿಗೆ ಹಾಕುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಾಗುವಂತೆ ಮಾಡಿದ್ದಾರೆ.

    ಇದರ ನಡುವೆ ಅರ್ಧ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಇದರೊಂದಿಗೆ ನಿಂಬೆ, ಸೀಬೆ, ಸಾಂಬಾರು ಏಲಕ್ಕಿ, ಚೆಕ್ಕೆ ಗಿಡ, ಲವಂಗ ನೆಟ್ಟಿದ್ದಾರೆ. ಜಯಕಾಯಿ ಗಿಡ ನೆಡುವ ಪ್ರಯತ್ನದಲ್ಲಿದ್ದು, ಅಮೃತ ನೋನಿ ಗಿಡವನ್ನು ನೆಟ್ಟಿರುವುದು ಮತ್ತೊಂದು ವಿಶೇಷ. ಈ ಎಲ್ಲ ಬೆಳೆಗಳಿಗೆ ನೀರುಣಿಸಲು ಸಿಪ್ಪಂಕ್ಲರ್ ಅಳವಡಿಸಿದ್ದಾರೆ. ವ್ಯವಸಾಯಕ್ಕೆಂದು ಒಂದು ಬೋರ್ ವೆಲ್ ಕೊರೆಸಲಾಗಿದ್ದು, ಕೂಲಿ ಆಳುಗಳನ್ನು ಬಾಳೆ ಗಿಡ ನೆಡಲು ಹಾಗೂ ಕಾಫಿ ಹಣ್ಣು ಕೀಳಲು ಮಾತ್ರ ಆಳುಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ತಿಂಗಳಿಗೊಮ್ಮೆ 1,200 ಮಾರಾಟ ಮಾಡಿಲಿದ್ದು, ಇದರಿಂದ ವರ್ಷಕ್ಕೆ 2.5 ಲಕ್ಷ ರೂ. ಪಡೆಯುತ್ತಿದ್ದಾರೆ. ಅಂತೆಯೆ ತೆಂಗು, ಅಡಕೆ, ಕಾಫಿ ಬೆಳೆಯಿಂದ 6 ರಿಂದ 7 ಲಕ್ಷ ರೂ.ಆದಾಯ ಪಡೆಯುತ್ತಿದ್ದಾರೆ. ರೈತ ಸೋಮೇಶ್‌ಗೆ ಪತ್ನಿ ಸಾಥ್ ನೀಡುತ್ತಾರೆ. ಉಳುಮೆ ಮಾಡುವುದರ ಜತೆಗೆ ಗಿಡಗಳನ್ನೂ ಪತ್ನಿಯೇ ಪೋಷಣೆ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಇಬ್ಬರು ಮಕ್ಕಳು ಕೂಡ ವ್ಯವಸಾಯಕ್ಕೆ ಸಾಥ್ ನೀಡುವ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ.

    ತಾಲೂಕಿನಲ್ಲಿ ಕಾಫಿ ಬೆಳೆಯುವುದಕ್ಕೆ ಉತ್ತಮ ವಾತಾವರಣ ಇದೆ. ಈಗಾಗಲೇ ಅಂತರಸಂತೆ, ಶಿಂಡೇನಹಳ್ಳಿ, ಪಡುಕೋಟೆ ಸೇರಿದಂತೆ ಇತರೆಡೆ ರೈತರು ಕಾಫಿ ಬೆಳೆ ಬೆಳೆಯುತ್ತಿದ್ದು, ಎಲ್ಲ ರೈತರು ಇದನ್ನು ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಚಾಮಹಳ್ಳಿ ರೈತ ಯಾವುದೇ ರೀತಿಯ ಗೊಬ್ಬರ ಬಳಸದೆ ತೋಟಗಾರಿಕೆ ಬೆಳೆ ಬೆಳೆಯುತ್ತಿರುವುದು ಉತ್ತಮ ಆರೋಗ್ಯಕರ ವಾದ ಸಂಗತಿ.
    ಜಯರಾಮಯ್ಯ ಕೃಷಿ ಅಧಿಕಾರಿ ಎಚ್.ಡಿ.ಕೋಟೆ

    ಭೂಮಿ ತಾಯಿಯನ್ನು ನಂಬಿ ವ್ಯವಸಾಯ ಮಾಡಿದರೆ ಯಾವ ರೈತ ಕೂಡ ಆತ್ಮಹತ್ಯೆ ಎಂಬ ಕೆಟ್ಟ ಯೋಚನೆ ಮಾಡಲಾರ. ಯಾವ ರೈತ ಒಂದೇ ಬೆಳೆಗೆ ಒಗ್ಗಿಕೊಳ್ಳುತ್ತಾನೋ ಅವನು ವ್ಯವಸಾಯದಲ್ಲಿ ಲಾಭ ಕಾಣಲು ಸಾಧ್ಯವಿಲ್ಲ. ಶ್ರಮವಹಿಸಿ ಕೆಲಸ ಮಾಡಿದರೆ ವ್ಯವಸಾಯದಲ್ಲಿಯೂ ಲಾಭ ಕಾಣಬಹುದು.
    ಸಿ.ಎನ್.ಸೋಮೇಶ್ ಮಾದರಿ ರೈತ ಚಾಮಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts