More

  ಕಳೆಗುಂದಿದ ಕ್ಯಾಮೇನಹಳ್ಳಿ ಜಾನುವಾರು ಜಾತ್ರೆ

  ಕೊರಟಗೆರೆ: ದಕ್ಷಿಣ ಭಾರತದ ಐತಿಹಾಸಿಕ ಕಮನೀಯ ಕ್ಷೇತ್ರ ಎಂದೇ ಪ್ರತೀತಿಯಿರುವುದು ತಾಲೂಕಿನ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಕ್ಷೇತ್ರ. ಸ್ವಾಮಿಯ ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿ ನಡೆಯುವ ಜಾನುವಾರು ಜಾತ್ರೆ ರಾಜ್ಯಾದ್ಯಂತ ಹೆಸರುವಾಸಿ. ಆದರೆ ಇತ್ತೀಚೆಗೆ ಜಾನುವಾರು ಜಾತ್ರೆ ಕಳೆಗುಂದಿದ್ದು, ಇದಕ್ಕೆ ತಾಲೂಕು ಆಡಳಿತದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

  ಸಂಕ್ರಾಂತಿ ಹಬ್ಬದಿಂದ ಪ್ರಾರಂಭವಾಗಿ 15 ದಿನಗಳ ಕಾಲ ನಡೆಯುವ ಜಾತ್ರೆಗೆ 10 ರಿಂದ 12 ಸಾವಿರ ರಾಸುಗಳು ಸೇರುತ್ತಿದ್ದವು, ಆದರೆ, ಪ್ರಸ್ತುತ ವರ್ಷ ಪ್ರಚಾರದ ಕೊರತೆ, ಬರದಿಂದಾಗಿ ಈ ವರ್ಷ 3 ರಿಂದ 4 ಸಾವಿರ ರಾಸುಗಳು ಮಾತ್ರ ಬಂದಿವೆ.

  ದೇವಾಲಯ ಮತ್ತು ಜಾತ್ರೆಯ ಹರಾಜಿನಿಂದ ಮುಜರಾಯಿ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಇದ್ದರೂ ಸಹ ಪ್ರಚಾರ, ಸಮರ್ಪಕ ಮೂಲಸೌಲಭ್ಯ ಒದಗಿಸಿಲ್ಲ. ಇನ್ನು ಪ್ರವಾಸೋದ್ಯಮ ಇಲಾಖೆಗೆ ಇಲ್ಲೊಂದು ದೇವಾಲಯ ಇದೆ ಎನ್ನುವ ಮಾಹಿತಿಯೇ ಇಲ್ಲವಾದಂತಿದೆ.

  ಬರಗಾಲದ ನಡುವೆಯೂ ಜಾತ್ರೆಯಲ್ಲಿ 40 ಸಾವಿರದಿಂದ 4 ಲಕ್ಷ ರೂ. ಬೆಳೆಬಾಳುವ ರಾಸುಗಳ ವಹಿವಾಟು ನಡೆದಿದ್ದು, ಹೊರರಾಜ್ಯದಿಂದ ವ್ಯಾಪಾರಸ್ಥರು, ರೈತರು ಬಂದಿರುವುದರಿಂದ ಜೊಡೆತ್ತುಗಳ ವಹಿವಾಟು ಇದ್ದಿದ್ದರಲ್ಲಿ ಪರವಾಗಿಲ್ಲ.

  ಫೆ.1ಕ್ಕೆ ಬ್ರಹ್ಮ ರಥೋತ್ಸವ: ಜ.30 ರಿಂದ ಫೆ.10ರವರೆಗೆ ಆಂಜನೇಯ ಸ್ವಾಮಿ ದೇಗುಲದಲ್ಲಿ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಫೆ.1 ರಂದು ಬ್ರಹ್ಮ ರಥೋತ್ಸವ ನಡೆಯಲಿದ್ದು ರಾಜ್ಯ ಹಾಗೂ ಸೀಮಾಂಧ್ರ ಮತ್ತು ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

  ಮುಜರಾಯಿ ಖಜಾನೆಗೆ ಆದಾಯ: ಜಾತ್ರೆ ದಿನವೇ ಲಕ್ಷಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಖಜಾನೆಗೆ ಹರಿದುಬರುತ್ತದೆ, ಜಾನುವಾರು ಜಾತ್ರೆಗೆ ಬರುವ ಗಾಡಿ, ರಾಸು, ಅಂಗಡಿ ಮತ್ತು ತೆಂಗಿನಕಾಯಿ ಒಡೆಯುವುದಕ್ಕೆ 3.40ಲಕ್ಷ ರೂ. ಹರಾಜು ಪ್ರಕ್ರಿಯೆ ನಡೆದಿದೆ. ಇಷ್ಟೆಲ್ಲ ಆದಾಯ ಬಂದರೂ ಮೂಲಸೌಕರ್ಯ ಕಲ್ಪಿಸುವಲ್ಲಿ ಮುಜರಾಯಿ ಇಲಾಖೆ ವಿಫಲವಾಗಿದೆ.

  ಕುಡಿಯುವ ನೀರಿನ ಪೂರೈಕೆ ಮತ್ತು ಶೌಚಗೃಹ ನಿರ್ವಹಣೆಗೆ ಗ್ರಾಪಂಗೆ ತಿಳಿಸಲಾಗಿದೆ, ರಾಸು ಮತ್ತು ರೈತರಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಕಾರಕ್ಕೆ ಮಾಹಿತಿ ರವಾನಿಸಿದ್ದು, ಶೀಘ್ರ ಸಮಸ್ಯೆ ಪರಿಹರಿಸಲಾಗುವುದು.
  ಗೋವಿಂದರಾಜು ತಹಸೀಲ್ದಾರ್

  ರಾಸು ಕೊಳ್ಳಲು ಕ್ಯಾಮೇನಹಳ್ಳಿ ಜಾತ್ರೆಗೆ ಬಳ್ಳಾರಿಯಿಂದ ಪ್ರತಿವರ್ಷ ಬರುತ್ತವೆ. ಉತ್ತಮ ತಳಿಯ ರಾಸುಗಳನ್ನು 5 ದಿನಗಳಿಂದ ಹುಡುಕಿದರೂ ಸಿಗುತ್ತಿಲ್ಲ. ಮೇವು ಮತ್ತು ನೀರಿನ ಕೊರತೆ ಸಡಗರ ನುಂಗಿದೆ, ಇನ್ನೆರಡು ದಿನ ನೋಡಿ ನಮ್ಮೂರಿಗೆ ಹಿಂದಿರುಗುತ್ತೇವೆ.
  ಕೃಷ್ಣಪ್ಪ ರೈತ, ಉಜ್ಜನಿ ಬಳ್ಳಾರಿ

  ಕ್ಯಾಮೇನಹಳ್ಳಿ ದನಗಳ ಜಾತ್ರೆ ಸ್ಥಳೀಯ ರೈತರಿಗೆ ಹಬ್ಬ. ಬರದಿಂದಾಗಿ ವರ್ಷದಿಂದ ವರ್ಷಕ್ಕೆ ತನ್ನ ಸೊಬಗು ಕಳೆದುಕೊಳ್ಳುತ್ತಿದೆ, ಮೇವಿಲ್ಲ ಎಂದು ಕೆಲವರು ರಾಸುಗಳನ್ನು ಮಾರುತ್ತಿದ್ದರೆ, ಕೆಲವರು ಇಷ್ಟು ಹಣ ತೆತ್ತು ರಾಸು ಖರೀದಿಸುವುದು ಹೇಗೆ ಎನ್ನುವಂತಾಗಿದೆ.
  ರಾಜಣ್ಣ ರೈತ ಕೊರಟಗೆರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts