More

    ಹಾಳು ಕೊಂಪೆಯಾದ ಕೈಗಾರಿಕಾ ಪ್ರದೇಶ

    ಸವಣೂರ: ಪಟ್ಟಣದ ಹೊರವಲಯದಲ್ಲಿರುವ ಶಿಗ್ಗಾಂವಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವದ್ಧಿ ನಿಗಮದ ವತಿಯಿಂದ ನಿರ್ಮಿಸಲಾಗಿರುವ ಇಂಡಸ್ಟ್ರಿಯಲ್ ಎಸ್ಟೇಟ್ (ಕೈಗಾರಿಕಾ ಪ್ರದೇಶ) ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದ ಪಾಳು ಬಿದ್ದಿದ್ದು, ಕೈಗಾರಿಕೆಗಳ ಸ್ಥಾಪನೆಗೆಗೆ ಹಿನ್ನಡೆಯಾಗುತ್ತಿದೆ.

    1998ರಲ್ಲಿ ಸುಮಾರು 15 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ, 120 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲಾಗಿದೆ. ಆದರೆ, ಮೂಲಸೌಕರ್ಯ ಒದಗಣೆ, ಸೂಕ್ತ ನಿರ್ವಹಣೆ ಮಾಡದೇ ಇರುವುದರಿಂದ ಕೈಗಾರಿಕೆ ಪ್ರದೇಶ ಹಾಳು ಕೊಂಪೆಯಂತೆ ಭಾಸವಾಗುತ್ತಿದೆ. ನಿವೇಶನಗಳನ್ನು ಹಂಚಿಕೆ ಮಾಡಿದ ಇಲಾಖೆ ಉದ್ದಿಮೆ ನಡೆಸುವವರಿಗೆ ಸೂಕ್ತ ಮೂಲಸೌಕರ್ಯ ಒದಗಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

    ನೀರಿನ ವ್ಯವಸ್ಥೆ, ಚರಂಡಿ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಬೀದಿ ದೀಪದ ವ್ಯವಸ್ಥೆ ಕಲ್ಪಿಸದ ಕಾರಣ ರಾತ್ರಿ 7 ಗಂಟೆಯ ನಂತರ ಇಲ್ಲಿ ಓಡಾಡುವುದು ದುಸ್ತರವಾಗಿದೆ. ಪಟ್ಟಣದಿಂದ ಒಂದು ಕಿ.ಮೀ. ದೂರ ಇರುವುದರಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗಲು ಸಾಹಸವನ್ನೇ ಮಾಡಬೇಕು. ಹೀಗಾಗಿ ಹಲವರು ಇಲ್ಲಿ ಉದ್ದಿಮೆ ಸ್ಥಾಪಿಸಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

    ಸ್ವಚ್ಛತೆ ಮರೀಚಿಕೆ: ಕೈಗಾರಿಕಾ ಪ್ರದೇಶದ ತುಂಬೆಲ್ಲ ಖಾಲಿ ಜಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಹಂದಿ, ನಾಯಿಗಳು ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಪ್ರದೇಶದ ಸುತ್ತಲೂ ರಕ್ಷಣಾ ಗೋಡೆ, ಬೇಲಿ ಇಲ್ಲದ ಕಾರಣ ವಿಶಾಲ ಜಾಗವು ಗೋಮಾಳವಾಗಿ ಬಳಕೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಕಿಡಿಗೇಡಿಗಳು ಪಾನಗೋಷ್ಠಿ ಮಾಡುವುದರಲ್ಲದೆ, ಅಕ್ರಮ ಚಟುವಟಿಕೆಗಳೂ ಎಗ್ಗಿಲ್ಲದೇ ನಡೆಯುತ್ತಿವೆ.

    ಇಲ್ಲಿ ಇಲಾಖೆ ವತಿಯಿಂದ ಕೆಲ ಉದ್ದಿಮೆದಾರರು ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಿಸಿ ಸಣ್ಣ ಕೈಗಾರಿಕೆ, ಉದ್ದಿಮೆ ನಡೆಸುತ್ತಿದ್ದಾರೆ. ಇನ್ನು ಕೆಲವರು ನಿವೇಶನ ಪಡೆದು ಖಾಲಿ ಬಿಟ್ಟಿದ್ದಾರೆ. ಲೋಜೆನ್ ಫಾರ್ಮಾ ಪ್ರೈ.ಲಿ. ಕಂಪನಿ ಸೇರಿದಂತೆ 10-12 ಸಣ್ಣ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಲೋಜೆನ್ ಫಾರ್ಮಾ ಕಂಪನಿ ಪ್ರಾರಂಭವಾಗಿದ್ದರಿಂದ ಈ ಭಾಗದ ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಸಿಕ್ಕಂತಾಗಿದೆ.

    ಈ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ವಸಾಹತು ಪ್ರದೇಶದಲ್ಲಿ ನೀರು, ರಸ್ತೆ, ಚರಂಡಿ ಸೇರಿದಂತೆ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸ್ಥಳೀಯರಿಗೆ ಹೆಚ್ಚೆಚ್ಚು ಉದ್ಯೋಗ ದೊರಕಿಸಿಕೊಡಬೇಕಿದೆ.

    ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಯೋಜನೆ ರೂಪಿಸುವುದು ಅವಶ್ಯವಾಗಿದೆ. ಖಾಲಿ ನಿವೇಶನ ಹಾಗೂ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪುಂಡ ಪೋಕರಿಗಳ ಹಾವಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಪೊಲೀಸರು ಈ ಪ್ರದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
    I ಅರುಣ ತಳ್ಳಿಹಳ್ಳಿ, ಸ್ಥಳೀಯ ನಿವಾಸಿ

    ಸವಣೂರಿನ ಕೈಗಾರಿಕಾ ಪ್ರದೇಶವು ಪುರಸಭೆ ವ್ಯಾಪ್ತಿಗೆ ಬರುವುದರಿಂದ ಅತೀ ಶೀಘ್ರದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಪುರಸಭೆಗೆ ಹಸ್ತಾಂತರಿಸಲಾಗುವುದು. ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

    i ವಿನಾಯಕ ಜೋಶಿ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts