More

    ಬೃಹತ್​ ಉಪನ್ಯಾಸದಿಂದ ಯುವಸಮುದಾಯಕ್ಕೆ ನಿರಾಸಕ್ತಿ

    ಸಾಹಿತಿ ಜಯಂತ್​ ಕಾಯ್ಕಿಣಿ ಅಭಿಪ್ರಾಯ — ಮಣಿಪಾಲದಲ್ಲಿ ವಿಚಾರ ಸಂಕಿರಣ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಸಾಹಿತ್ಯ ಎನ್ನುವುದು ಬದುಕು ಅರಿಯುವ ಕಿಂಡಿಯಾಗಿದೆ. ಮಾನವನಿಗಿರುವ ನೋವು ನಿವಾರಿಸುವುದೇ ಕಲೆ ಮತ್ತು ಸಾಹಿತ್ಯದ ಉದ್ದೇಶವಾಗಿದೆ. ಆದರೆ, ದೊಡ್ಡ ದೊಡ್ಡ ಉಪನ್ಯಾಸ, ಪ್ರವಚನ ನೀಡುತ್ತಿರುವುದರಿಂದ ಯುವ ಜನರು ಸಾಹಿತ್ಯದಿಂದ ದೂರವಾಗುತ್ತಿದ್ದಾರೆ ಎಂದು ಖ್ಯಾತ ಸಾಹಿತಿ ಜಯಂತ್​ ಕಾಯ್ಕಿಣಿ ಅಭಿಪ್ರಾಯಪಟ್ಟರು.

    ಮಣಿಪಾಲದ ಗಾಂಧಿಯನ್​ ಸೆಂಟರ್​ ಫಾರ್​ ಫಿಲಾಸಫಿಕಲ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​ ಆಶ್ರಯದಲ್ಲಿ ಮಾಹೆಯ ತಾರಾಲಯದ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಜಯಂತ್​ ಕಾಯ್ಕಿಣಿ ಮತ್ತು ಅವರ ಸಾಹಿತ್ಯದೊಂದಿಗೆ ಒಂದು ದಿನ’ ಎಂಬ ವಿಚಾರ ಸಂಕಿರಣ-ಸಂವಾದದಲ್ಲಿ ಮಾತನಾಡಿದರು.

    ಆಸ್ಪತ್ರೆಯೂ ಧಾರ್ಮಿಕ ತಾಣ

    ಆಸ್ಪತ್ರೆ ಎನ್ನುವುದೂ ಸಹ ಒಂದು ಆಧ್ಯಾತ್ಮಿಕ ತಾಣ. ಇಲ್ಲಿ ಮನುಷ್ಯನ ಅಹಂಕಾರ, ಜಾತಿ, ಕುಲ, ಗೋತ್ರ ಎಲ್ಲವೂ ಕರಗಿ ಹೋಗುತ್ತವೆ. ಹೀಗಾಗಿ ನನ್ನ ಬರವಣಿಗೆಗಳಲ್ಲಿ ಆಸ್ಪತ್ರೆಯೂ ಸಹ ಒಂದು ಮುಖ್ಯ ರೂಪಕವಾಗಿ ಕಾಣುತ್ತದೆ ಎಂದು ತಿಳಿಸಿದ ಅವರು, ತಂದೆ-ತಾಯಿಯ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿ ಕಳೆದ ದಿನಗಳ ಅನುಭವವನ್ನೂ ಹಂಚಿಕೊಂಡರು. ಸಾಹಿತ್ಯ ಕ್ಷೇತ್ರದ ನನ್ನ ಪಯಣದಲ್ಲಿ 50 ವರ್ಷ ಕಳೆದರೂ ಸಹ ಚಡಪಡಿಕೆ ಬದಲಾಗಿಲ್ಲ ಎಂದರು.

    ವಿದ್ಯಾರ್ಥಿಗಳೊಂದಿಗೆ ಸಂವಾದ

    ಅವಿನಾಶ್​ ಕಾಮತ್​ ಹಾಗೂ ವಿದ್ಯಾರ್ಥಿಗಳು ಕಾಯ್ಕಿಣಿ ಅವರ ಸಾಹಿತ್ಯದ ಕುರಿತಾಗಿ ನೇರವಾಗಿ ಅವರೊಂದಿಗೇ ಸಂವಾದ ನಡೆಸುವ ಮೂಲಕ ಹೊಸ ಅನುಭವ ಪಡೆದರು. ಸಾಂದರ್ಭಿಕವಾಗಿ ಹಾಸ್ಯಮಯ ಉತ್ತರದ ಮೂಲಕ ಸಂವಾದ ಕಾರ್ಯಕ್ರಮಕ್ಕೆ ಮೆರಗು ನೀಡಿದ ಜಯಂತ್​, ಯುವ ಸಮುದಾಯ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.

    ಸಾಕ್ಷ್ಯಚಿತ್ರ ಪ್ರದರ್ಶನ

    ಉದಯೋನ್ಮುಖ ಗಾಯಕಿ ಶ್ರಾವ್ಯಾ ಬಾಸ್ರಿ ಅವರು ಕಾಯ್ಕಿಣಿ ಸಾಹಿತ್ಯದ ಸಿನಿಮಾ ಹಾಡುಗಳಾದ ಅರಳುತಿರು ಜೀವದ ಗೆಳೆಯ, ಮಳೆಯಲಿ ಜತೆಯಲಿ, ನಿನ್ನಿಂದಲೇ ನಿನ್ನಿಂದಲೇ, ಮಳೆ ನಿಂತು ಹೋದ ಮೇಲೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕಾಯ್ಕಿಣಿ ಅವರ ಬರಹಗಳ ವಿವಿಧ ಪ್ರಕಾರಗಳಾದ ಸಣ್ಣ ಕಥೆ, ಕವನ, ಪ್ರಬಂಧ, ನಾಟಕ ಮತ್ತು ಹಾಡು, ವಿದ್ಯಾರ್ಥಿಗಳ ಗೋಷ್ಠಿ ಮತ್ತು ಕಾಯ್ಕಿಣಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಡಾ. ಸಿರಾಜ್​ ಅಹಮದ್​ ಅವರ ಪ್ರಬಂಧ ಓದಲಾಯಿತು.

    ಎಸ್​ಎಂಎಸ್​ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ಪ್ರಾಂಶುಪಾಲೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು. ಜೆಸಿಪಿಎಎಸ್​ ಮುಖ್ಯಸ್ಥ ವರದೇಶ್​ ಹಿರೇಗಂಗೆ ಸ್ವಾಗತಿಸಿದರು. ಗೌತಮಿ ಕಾಕತ್ಕರ್​ ಕಾರ್ಯಕ್ರಮ ನಿರೂಪಿಸಿದರು.

    ಜನರ ಕಥೆಗಳಿಗೆ ಹೊಳಪು ಕೊಟ್ಟ ಸಾಹಿತಿ

    ಬೆಳಗ್ಗೆ ನಡೆದ ವಿಚಾರ ಸಂಕಿರಣ ಉದ್ಘಾಟಿಸಿದ ಸಾಹಿತಿ, ವಿದ್ವಾಂಸ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಸಾಮಾನ್ಯ ಎನ್ನಬಹುದಾದ ಮನುಷ್ಯರ ಹಿಂದೆ ನೂರಾರು ಅಸಾಮಾನ್ಯ ಕಥೆಗಳಿವೆ ಎನ್ನುವುದನ್ನು ಜಯಂತ್​ ಅವರು ಬರಹಗಳಲ್ಲಿ ತೋರಿಸುತ್ತಾರೆ. ದೈನಂದಿನ ಸಾಮಾನ್ಯ ವಿವರಗಳಿಂದ ಅಸಾಮಾನ್ಯವಾದ ಈ ಜಗತ್ತಿನ ಕಥೆಗಳನ್ನು ಕಟ್ಟುವ ಅವರು, ಆ ಕಥೆಗಳಲ್ಲಿ ಅಸದೃಶವಾದುದನ್ನು ಹೊಳೆಸುತ್ತಾರೆ. ಅವರ ವಿವರಗಳಿಂದ ದಟ್ಟವಾದ ಕಥಾನಕಗಳನ್ನು ಯಾವತ್ತೂ ಬದಲಾಗುತ್ತಿರುವ ಸಾಂಸತಿಕ ಚರಿತ್ರೆಯ ಅಮೂಲ್ಯ ದಾಖಲೆಯನ್ನಾಗಿಯೂ ಓದಬಹುದು ಎಂದು ಶ್ಲಾಘಿಸಿದರು.

    ಜಯಂತ್​ ಅವರು ತಮ್ಮ ಪ್ರತಿ ಪುಸ್ತಕದಲ್ಲಿ ‘ಅರಿಕೆ’ಯನ್ನು ಬರೆಯುತ್ತ ಸಾಹಿತ್ಯದ ಕುರಿತಾದ ತಮ್ಮ ದೃಷ್ಟಿಕೋನವನ್ನು ಆ ಮೂಲಕ ಪ್ರಸ್ತುತ ಪಡಿಸುತ್ತಾರೆ. ಅರ್ಥವನ್ನೂ ಅನುಭವವಾಗಿಸುವ ಕ್ರಿಯೆಯೇ ಸಾಹಿತ್ಯ ಎನ್ನುವುದನ್ನು ಅವರು ತಮ್ಮ ಪ್ರಬಂಧಗಳಲ್ಲಿ ತಿಳಿಸುತ್ತಾರೆ.

    ವರದೇಶ್​ ಹಿರೇಗಂಗೆ. ಜೆಸಿಪಿಎಎಸ್​ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts