More

    ತುಂಬಿದ ಅಣೆಕಟ್ಟು ಕೃಷಿ ಅಚ್ಚುಕಟ್ಟು, ಬೇಸಿಗೆಯಲ್ಲೂ ಸಿಗಲಿದೆ ನೀರು

    ಮನೋಹರ್ ಬಳಂಜ ಬೆಳ್ತಂಗಡಿ

    ತಾಲೂಕಿನಲ್ಲಿ ಹಲವು ನದಿಗಳಿಗೆ ಅಣೆಕಟ್ಟು ನಿರ್ಮಾಣವಾಗಿ ನೀರು ತುಂಬಿರುವುದರಿಂದ ರೈತರ ಮೊಗದಲ್ಲಿ ಹರ್ಷ ಮೂಡಿದೆ.
    ಹಿಂದೆ ನದಿ ನೀರು ಕಡಿಮೆಯಾಗುತ್ತಿದ್ದಂತೆ ಸ್ಥಳೀಯರು ಮರಳು ಗೋಣಿಗಳಿಂದ, ಕಲ್ಲು ಮಣ್ಣಿನಿಂದ ಸಾಂಪ್ರದಾಯಿಕ ಕಟ್ಟ ಕಟ್ಟುತ್ತಿದ್ದರು. ಇದರಿಂದ ಸಾಧಾರಣ ನೀರು ಸಂಗ್ರಹವಾಗಿ ಭತ್ತ, ಅಡಕೆ ತೋಟಗಳಿಗೆ ಪ್ರಯೋಜನವಾಗುತ್ತಿತ್ತು. ಬಳಿಕ ಮಳೆಗಾಲ ಬಂದ ನಂತರ ಮಣ್ಣು ನೀರಿನಲ್ಲಿ ಕೊಚ್ಚಿಹೋಗುತ್ತಿತ್ತು. ರೈತರು ಪ್ರತಿವರ್ಷ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರು. ಈಗ ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಹೆಚ್ಚುವರಿ ನೀರು ಸಂಗ್ರಹವಾಗುತ್ತಿದ್ದು, ರೈತರಿಗೂ ಅನುಕೂಲವಾಗುತ್ತಿದೆ.

    ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ, ಕಪಿಲಾ, ಅಣಿಯೂರು ನದಿಗಳು ಸೇರಿ ಅನೇಕ ಕಡೆ ಸಾಂಪ್ರದಾಯಿಕ ಮತ್ತು ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿವೆ. ಶಾಸಕ ಹರೀಶ್ ಪೂಂಜ ಮಹತ್ವಾಕಾಂಕ್ಷೆಯ ಯೋಜನೆಯಂತೆ ಇನ್ನಷ್ಟು ಕಿಂಡಿ ಅಣೆಕಟ್ಟುಗಳು ಮಂಜೂರಾಗಿದ್ದು, ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿವೆ.

    ಏಪ್ರಿಲ್ ತನಕವೂ ನೀರು: ಹೆಚ್ಚಿನ ಕೃಷಿ ಕಟ್ಟಗಳಲ್ಲಿ ಏಪ್ರಿಲ್ ಕೊನೇ ತನಕವೂ ಕೃಷಿಗೆ ನೀರು ಸಿಗುತ್ತದೆ. ಈ ಕಟ್ಟಗಳ ಒಟ್ಟು ವೆಚ್ಚವನ್ನು ಕಟ್ಟದ ಎಲ್ಲ ಫಲಾನುಭವಿಗಳು ಗಂಟೆ, ಗಳಿಗೆ, ದಿನ ಇತ್ಯಾದಿ ಲೆಕ್ಕದ ಮೂಲಕ ಪಾಲು ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಕಟ್ಟಗಳನ್ನು ಪ್ರಕೃತಿಯಲ್ಲಿ ಸಿಗುವ ಸೊಪ್ಪು, ಮಣ್ಣು, ಕಲ್ಲು ಇತ್ಯಾದಿಗಳಿಂದ ನಿರ್ಮಿಸಲಾಗುತ್ತದೆ. ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆ, ಪ್ಲಾಸ್ಟಿಕ್, ಮರಳಿನ ಚೀಲಗಳನ್ನು ಅಡ್ಡವಾಗಿರಿಸಿ ಹಾಕಿ ನೀರು ಸಂಗ್ರಹಿಸಲಾಗುತ್ತದೆ.

    ಅಣೆಕಟ್ಟಿಗೆ ಬಿಡುಗಡೆಗೊಂಡ ಅನುದಾನ: ಫುಲ್ಲಾಜೆ(2.5 ಕೋಟಿ ರೂ.), ಕಡಂಬಳ್ಳಿ(5 ಕೋಟಿ ರೂ.), ಕನ್ಯಾಡಿ(1.5 ಕೋಟಿ ರೂ.), ಕೈಪಲೋಡಿ(6 ಕೋಟಿ ರೂ.), ಓಡದಕರಿಯ(4 ಕೋಟಿ ರೂ.), ಶಾಂತೇರಿ(1.5 ಕೋಟಿ ರೂ.), ಬೈಲು(1.5 ಕೋಟಿ ರೂ.), ನಡ್ಜೆ(1.5 ಕೋಟಿ ರೂ.), ಡೆಂಜೋಳಿ(2.5 ಕೋಟಿ ರೂ.), ಬಸ್ರು ಗುಂಡಿ(3 ಕೋಟಿ ರೂ.), ಹರ್ಪಳ(5 ಕೋಟಿ ರೂ.), ಹಲೇಜಿ(3.5 ಕೋಟಿ ರೂ.), ವರಿಮಾರು(4 ಕೋಟಿ ರೂ.), ಬರ್ಕಜೆ(5 ಕೋಟಿ ರೂ.), ಕುಂಟ್ಯಾನ(2.5 ಕೋಟಿ ರೂ.), ಮೂಡಾಯೂರು(50 ಲಕ್ಷ ರೂ.), ಪೆರಡಾಲ(9.97 ಕೋಟಿ ರೂ.), ಎಳನೀರು ಸಂಬೈ ಕೊಡಿ(5 ಕೋಟಿ ರೂ.), ರಾಮಯ್ಯರಕಟ್ಟ(8 ಕೋಟಿ ರೂ.), ಬದಿನೆಡೆ(3 ಕೋಟಿ ರೂ.), ಮುಳಿಕಾರು(14.97 ಕೋಟಿ ರೂ.), ಕಲ್ಮಂಜದ ಫಜಿರಡ್ಕ(4.5 ಕೋಟಿ ರೂ.), ಮುಂಡೇಲು(1.5 ಕೋಟಿ ರೂ.), ಕಮರಡ್ಕ(40 ಲಕ್ಷ ರೂ.).

    ನೂತನ ಕಿಂಡಿ ಅಣೆಕಟ್ಟುಗಳ ಯೋಜನೆ: ಬೆಳ್ತಂಗಡಿ ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಅಣಿಯೂರು, ಫಲ್ಗುಣಿ ಮೊದಲಾದ ನದಿ ಹಾಗೂ ಹೊಳೆಗಳಿಗೆ ಪಶ್ಚಿಮವಾಹಿನಿ ಯೋಜನೆಯಡಿ 20 ಹಾಗೂ ವಿಶೇಷ ಘಟಕ ಯೋಜನೆಯಡಿ 4 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸರ್ಕಾರ 125 ಕೋಟಿ ರೂ. ಬಿಡುಗಡೆಗೊಳಿಸಿದೆ. ಶಾಸಕರ ಸಮಿತಿಯಂತೆ ಅಂತರ್ಜಲ ವೃದ್ಧಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಗೆ 600 ಕೋಟಿ ರೂ. ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಪ್ರಥಮ ಹಂತದಲ್ಲಿ 125 ಕೋಟಿ ರೂ. ಅನುದಾನದ ಕಿಂಡಿ ಅಣೆಕಟ್ಟುಗಳನ್ನು ಒದಗಿಸಲಾಗಿದೆ.

    ಮಳೆಗಾಲದಲ್ಲಿ ಕರಾವಳಿಯ ನದಿಗಳು ತುಂಬಿ ಹರಿಯುತ್ತವೆ. ಆದರೆ ಬೇಸಿಗೆಯಲ್ಲಿ ವ್ಯಾಪಕ ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಅಂತರ್ಜಲ ವೃದ್ಧಿಗೆ ಬೆಳ್ತಂಗಡಿ ವ್ಯಾಪ್ತಿಯ ನದಿಗಳಲ್ಲಿ ಸರಣಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತಿಸಿದ್ದರ ಫಲವಾಗಿ ಆರಂಭಿಕ ಹಂತದಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ 125 ಕೋಟಿ ರೂ. ವೆಚ್ಚದಲ್ಲಿ 24 ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿವೆ.
    ಹರೀಶ್ ಪೂಂಜ
    ಶಾಸಕರು, ಬೆಳ್ತಂಗಡಿ

    ದ.ಕ., ಉಡುಪಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ತಡೆಯುವ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಅವಶ್ಯ. ಹೆಚ್ಚಿನ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. 5 ವರ್ಷಗಳಲ್ಲಿ ಇನ್ನಷ್ಟು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
    ಗೋಕುಲ್‌ದಾಸ್
    ಕಾರ್ಯಪಾಲಕ ಅಭಿಯಂತ, ಸಣ್ಣ ನೀರಾವರಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts