More

    ಕೋರ್ಟ್​ನಲ್ಲಿ ಒಂದಾದ ದಂಪತಿ

    ಬಸವನಬಾಗೇವಾಡಿ: ಐದು ವರ್ಷಗಳಿಂದ ವಿಚ್ಛೇದನಕ್ಕಾಗಿ ಓಡಾಡುತ್ತಿದ ದಂಪತಿ ಪಟ್ಟಣದ ಕೋರ್ಟ್‌ನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಂಧಾನವಾಗಿ ಮತ್ತೆ ದಾಂಪತ್ಯ ಜೀವನಕ್ಕೆ ಮರಳಿದರು.

    ಯಾದಗಿರಿ ಜಿಲ್ಲೆಯ ಹುಣಸಗಿಯ ಬಸವರಾಜ ಬಿರಾದಾರ ತಾಲೂಕಿನ ಚಿಮ್ಮಲಗಿಯ ಅಶ್ವಿನಿ ಅವರೊಂದಿಗೆ 11 ವರ್ಷಗಳ ಹಿಂದೆ ವಿವಾಹವಾಗಿತ್ತು. ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಕಳೆದ 5 ವರ್ಷಗಳಿಂದ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅಲೆಯುತ್ತಿದ್ದರು. ಪತಿ ಪರವಾಗಿ ವಕೀಲ ಸದಾನಂದ ಬಶೆಟ್ಟಿ, ಪತ್ನಿ ಪರವಾಗಿ ವಕೀಲ ಎಸ್.ಎಂ.ಗಬ್ಬೂರ ವಕಾಲತ್ತು ವಹಿಸಿದ್ದರು. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಇಬ್ಬರಿಗೂ ತಿಳಿವಳಿಕೆ ಹೇಳಿ ದಾಂಪತ್ಯ ಜೀವನ ಮುಂದುವರಿಸುವಂತೆ ಸಲಹೆ ನೀಡಿದರು.

    ನ್ಯಾಯಾಧೀಶರ ಮಾತಿಗೆ ಸ್ಪಂದಿಸಿದ ದಂಪತಿ ನ್ಯಾಯಾಧೀಶರು ಹಾಗೂ ವಕೀಲರ ಸಮ್ಮುಖದಲ್ಲಿ ಪರಸ್ಪರ ಗುಲಾಬಿ ಹೂ ಬದಲಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನ ಮುಂದುವರಿಕೆಗೆ ಸಂತೋಷದಿಂದ ಒಪ್ಪಿದರು.

    ತಾಲೂಕಿನ ರಬಿನಾಳ ಗ್ರಾಮದ ಹಾವಿನವರ ಹಾಗೂ ಹಿಪ್ಪರಗಿ ಅವರ ಸಂಬಂಧಿಕರಲ್ಲಿ 35 ಗುಂಟೆ ಕ್ಷೇತ್ರಕ್ಕಾಗಿ 38 ವರ್ಷದಿಂದ ನಡೆಯುತ್ತಿದ್ದ ವ್ಯಾಜ್ಯವನ್ನು ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ವಾದಿಯ ಪರ ವಕೀಲ ವೀರಣ್ಣ ಮರ್ತೂರ, ಪ್ರತಿವಾದಿ ಪರ ವಕೀಲ ವಿ.ಜಿ.ಕಲಕರ್ಣಿ ವಕಾಲತ್ತು ವಹಿಸಿದ್ದರು.

    ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಜನರು ಕೋರ್ಟ್‌ಗೆ ಅಲೆಯುವ ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿ ಕಾಣಬಹುದು ಎಂದರು.

    ಕೋರ್ಟ್‌ನ ವಿವಿಧ ಸಭಾಂಗಣಗಳಲ್ಲಿ ಜರುಗಿದ ಲೋಕ ಅದಾಲತ್‌ನಲ್ಲಿ 1,442 ಸಿವಿಲ್, ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್‌ಗೆ ಸಂಬಂಧಿಸಿದ 11 ಪ್ರಕರಣ ಇತ್ಯರ್ಥವಾದವು.

    ನ್ಯಾಯಾಧೀಶರಾದ ತಯ್ಮಬ ಸುಲ್ತಾನ, ಸೌಮ್ಯ ಹೂಲಿ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಗುರಡ್ಡಿ, ವಕೀಲರಾದ ಜಿ.ಬಿ. ಬಾಗೇವಾಡಿ, ಬಿ.ಆರ್. ಅಡ್ಡೋಡಗಿ, ಬಿ.ಕೆ. ಕಲ್ಲೂರ, ಮಹಾಂತೇಶ ಮನಗೂಳಿ, ಮಲ್ಲಿಕಾರ್ಜುನ ಗೊಳಸಂಗಿ, ಎ.ಕೆ. ಗಂಜಾಳ, ಸದಾನಂದ ಬಶೆಟ್ಟಿ, ರಾಜು ಪವಾರ, ವೈ.ಎನ್. ಲೆಂಕನ್ನವರ, ಎನ್.ಎಸ್. ಬಿರಾದಾರ ಜಿ.ಜಿ. ಬಿಸನಾಳ ವಿ.ಬಿ. ಕಲ್ಲೂರ, ಎಂ.ಎಸ್. ಬಿದರಕುಂದಿ, ರವಿ ರಾಠೋಡ, ಜಿ.ಆರ್. ಬೀಳಗಿ, ಆರ್.ಬಿ. ಗಣಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts