More

    ವಾಣಿಜ್ಯ ನಗರಿಗೆ ಬೇಕು ವರ್ತುಲ ರಸ್ತೆ

    ರಾಣೆಬೆನ್ನೂರ: ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್‌ನ ಪ್ರಕಾಶ ಕೋಳಿವಾಡ ಆಯ್ಕೆಯಾಗಿದ್ದು, ತಾಲೂಕಿನ ಮತದಾರರು ಅವರಿಂದ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಿರೀಕ್ಷಿಸುತ್ತಿದ್ದಾರೆ.

    ನಗರದಲ್ಲಿ ಪ್ರಮುಖವಾಗಿ ನೂತನ ಬಸ್ ನಿಲ್ದಾಣ, ಎಸಿ ಕಚೇರಿ ಸ್ಥಾಪನೆ, ವರ್ತುಲ ರಸ್ತೆ ನಿರ್ಮಾಣ, ಶಹರಕ್ಕೆ ಇನ್ನೊಂದು ಪೊಲೀಸ್ ಠಾಣೆ ಸೇರಿ ವಿವಿಧ ಜನಪರ ಕಾರ್ಯಗಳಿಗೆ ನೂತನ ಶಾಸಕರು ಆದ್ಯತೆ ನೀಡಬೇಕಿದೆ.

    ಹಾವೇರಿ ಜಿಲ್ಲೆಯಲ್ಲಿಯೇ ರಾಣೆಬೆನ್ನೂರ ಅತಿ ದೊಡ್ಡ ವಾಣಿಜ್ಯ ನಗರ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತವಾದ ಹೊಸ ಬಸ್ ನಿಲ್ದಾಣದ ಅಗತ್ಯವಿದೆ. ಈಗಿರುವ ಬಸ್‌ನಿಲ್ದಾಣವು ನಗರದ ಮಧ್ಯಭಾಗದಲ್ಲಿದ್ದು ಬಹಳ ಚಿಕ್ಕದಾಗಿದೆ. ಬಸ್‌ಗಳು ಸರಾಗವಾಗಿ ನಿಲ್ದಾಣದ ಒಳಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ.

    ಇದರ ಸಮೀಪದಲ್ಲಿಯೇ ಟ್ರಾಫಿಕ್ ಸಿಗ್ನಲ್ ಇರುವುದರಿಂದ ಅನೇಕ ಬಾರಿ ಈ ಮಾರ್ಗವಾಗಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಇಲ್ಲಿನ ಸಮಸ್ಯೆ ಅರಿತ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡರು ಬಸ್ ನಿಲ್ದಾಣವನ್ನು ನಗರದ ಬೇರೊಂದು ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬ ಮಹದಾಸೆ ಹೊಂದಿದ್ದರು. ತಂದೆಯ ಆಸೆಯನ್ನು ಮಗ ಸಾಕಾರಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

    ವರ್ತುಲ ರಸ್ತೆ ತುರ್ತು ಅಗತ್ಯ: ಬೃಹದಾಕಾರವಾಗಿ ಬೆಳೆಯುತ್ತಿರುವ ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಸಹಯೋಗದೊಂದಿಗೆ ನೀಲಿನಕ್ಷೆ ರೂಪಿಸಿ ಜಾರಿಗೆ ತರಬೇಕಾಗಿದೆ.

    ಪೊಲೀಸ್ ಠಾಣೆ: ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಣೆಬೆನ್ನೂರ ನಗರವು ಹಾವೇರಿಗಿಂತ ಎರಡು ಪಟ್ಟು ದೊಡ್ಡದಾಗಿದೆ.

    ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಐದು ಕೋರ್ಟ್ ಹಾಲ್‌ಗಳಿವೆ. ಸಮನ್ಸ್ ಮತ್ತು ವಾರಂಟ್ ಜಾರಿಗೆ ಸಿಬ್ಬಂದಿ ಅವಶ್ಯಕತೆ ಇದೆ. ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿಯ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇದಲ್ಲದೆ ಬೆಳೆಯುತ್ತಿರುವ ನಗರದ ಜನತೆಗೆ ಭದ್ರತೆ ಒದಗಿಸುವ ಸಲುವಾಗಿಯೂ ಇನ್ನೊಂದು ಠಾಣೆಯ ಅವಶ್ಯವಿದೆ.

    ಈ ಹಿಂದೆ ಇಲ್ಲಿನ ಶ್ರೀರಾಮ ನಗರದಲ್ಲಿ ಒಂದು ಪೊಲೀಸ್ ಠಾಣೆ ಸ್ಥಾಪಿಸುವ ಕುರಿತು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ಗುರುತರ ಜವಾಬ್ದಾರಿ ನೂತನ ಶಾಸಕರ ಮೇಲಿದೆ.

    ಉದ್ಯೋಗ ಸೃಷ್ಟಿಗೆ ಕ್ರಮ: ಶಾಸಕ ಪ್ರಕಾಶ ಕೋಳಿವಾಡ ಅವರು ಚುನಾವಣೆ ಸಂದರ್ಭದಲ್ಲಿ ತಾಲೂಕನ್ನು ನಿರುದ್ಯೋಗ ಮುಕ್ತಗೊಳಿಸುವ ಹಾಗೂ ಸ್ಥಳೀಯವಾಗಿ ಕಾರ್ಖಾನೆಗಳನ್ನು ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ನಿಕಟಪೂರ್ವ ಶಾಸಕ ಅರುಣಕುಮಾರ ಪೂಜಾರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಇದರ ಬಗ್ಗೆ ನೂತನ ಶಾಸಕರು ಆಸಕ್ತಿ ವಹಿಸಿದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಜತೆಯಲ್ಲಿ ನೇಕಾರರಿಗೂ ಪರೋಕ್ಷವಾಗಿ ಸಾಕಷ್ಟು ಸಹಾಯವಾಗಲಿದೆ.

    ಉಪ ವಿಭಾಗಾಧಿಕಾರಿ ಕಚೇರಿ

    ರಾಣೆಬೆನ್ನೂರ ತಾಲೂಕು ಸದ್ಯ ಹಾವೇರಿ ಉಪ ವಿಭಾಗದ ವ್ಯಾಪ್ತಿಯಲ್ಲಿದೆ. ರೈತರ ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣ, ಭೂಸ್ವಾಧೀನ ಪ್ರಕರಣಗಳು, ಇನಾಮು ಜಮೀನಿಗೆ ಸಂಬಂಧಿಸಿದ ಪ್ರಕರಣಗಳು, ಭೂನ್ಯಾಯ ಮಂಡಳಿ ವ್ಯಾಜ್ಯಗಳು ಮುಂತಾದವುಗಳಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಹಾರ ದೊರಕುತ್ತದೆ.

    ಹೀಗಾಗಿ ಇಲ್ಲಿನ ಜನತೆ ನಿತ್ಯವೂ ಹಾವೇರಿಗೆ ಅಲೆಯಬೇಕಾಗುತ್ತಿದೆ. ಇದನ್ನು ತಪ್ಪಿಸಲು ಬ್ಯಾಡಗಿ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕುಗಳನ್ನು ಒಳಗೊಂಡು ನಗರದಲ್ಲಿಯೇ (ನೂತನ) ಉಪ ವಿಭಾಗಾಧಿಕಾರಿ ಕಚೇರಿ ಪ್ರಾರಂಭಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಸಲ್ಲಿಸಿದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇದೆ. ಅದನ್ನು ಜಾರಿಗೆ ತರಲು ನೂತನ ಶಾಸಕರು ಇಚ್ಛಾಶಕ್ತಿ ತೋರಬೇಕಿದೆ.


    ರಾಣೆಬೆನ್ನೂರನ್ನು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದಾಗಿದೆ. ಅದರ ಕಲ್ಪನೆಯೊಂದಿಗೆ ನಾನು ಹೆಜ್ಜೆ ಹಾಕುವೆ. ಜನರ ನಿರೀಕ್ಷೆಯಂತೆ ಆದಷ್ಟು ಬೇಗ ಅಭಿವೃದ್ಧಿ ಕೆಲಸಗಳನ್ನು ಒಂದೊಂದಾಗಿ ಆರಂಭಿಸಲಾಗುವುದು.

    -ಪ್ರಕಾಶ ಕೋಳಿವಾಡ, ಶಾಸಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts