More

    ಎಚ್​ಡಿಕೆಗೆ ಟಕ್ಕರ್​ ಕೊಟ್ಟ ಸಿಪಿವೈ: ಕೊನೆಗೂ ತಹಸೀಲ್ದಾರ್​ ಎತ್ತಂಗಡಿ, ಕೊನೇ ಕ್ಷಣದವರೆಗೂ ಗೌಪ್ಯವಾಗಿದ್ದ ಆದೇಶ

    ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಹಸೀಲ್ದಾರ್​ ವರ್ಗಾವಣೆ ವಿಚಾರ ತಾಲೂಕಿನಲ್ಲಿ ಉಭಯ ನಾಯಕರ ಕದನ ಮತ್ತೆ ಮುನ್ನಲೆಗೆ ಬಂದಿದೆ. ಕಾರಣವಾಗಿದ್ದು, ಈ ವಿಚಾರದಲ್ಲಿ ತಹಸೀಲ್ದಾರ್​ಗಳು ನೆಪಮಾತ್ರವಾದರೂ ಎಚ್​ಡಿಕೆ ಮತ್ತು ಸಿಪಿವೈ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿ ಪರಿಣಮಿಸಿದೆ. ಶುಕ್ರವಾರ ನಡೆದ ದಿಢೀರ್​ ಬೆಳವಣಿಗೆಯಲ್ಲಿ ಸಿಪಿವೈ ಕೈ ಮೇಲಾಗಿದ್ದು, ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಾಳೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ.

    ಚನ್ನಪಟ್ಟಣ ತಹಸೀಲ್ದಾರ್​ ಎಲ್​.ನಾಗೇಶ್​ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಕ್ಕೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಸುದರ್ಶನ್​ ನಿಯೋಜನೆಗೊಂಡಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎನ್​.ಸುಶೀಲ ಶುಕ್ರವಾರ ಈ ಆದೇಶ ಹೊರಡಿಸಿದ್ದು, ತಕ್ಷಣ ಜಾರಿಗೆ ಬರುವಂತೆ ಸುದರ್ಶನ್​ ಅವರನ್ನು ತಹಸೀಲ್ದಾರ್​ ಆಗಿ ನಿಯೋಜನೆಗೊಳ್ಳುವಂತೆ ಹಾಗೂ ನಾಗೇಶ್​ ಅವರನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

    ರಾಜಕೀಯ ಜಂಗೀಕುಸ್ತಿ: ತಹಸೀಲ್ದಾರ್​ ವರ್ಗಾವಣೆ ವಿಚಾರ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಎಲ್​.ನಾಗೇಶ್​ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುದರ್ಶನ್​ ಪರವಾಗಿ ಸಿ.ಪಿ.ಯೋಗೇಶ್ವರ್​ ಲಾಬಿ ನಡೆಸುವ ಮೂಲಕ ಈ ಹುದ್ದೆಯನ್ನು ತಮ್ಮ ಕಡೆಯವರೇ ಅಲಂಕರಿಸಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲೇ ಇದ್ದ ತಹಸೀಲ್ದಾರ್​ ನಾಗೇಶ್​ ಕೊನೆಗೂ ವರ್ಗಾವಣೆಗೊಂಡಿದ್ದು, ತಹಸೀಲ್ದಾರ್​ ವರ್ಗಾವಣೆ ವಿಚಾರದಲ್ಲಿ ಯೋಗೇಶ್ವರ್​ ಕೈ ಮೇಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

    ಮುಖಭಂಗ: ಕಳೆದ ಏ.8ರಂದು ತಹಸೀಲ್ದಾರ್​ ಎಲ್​.ನಾಗೇಶ್​ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಸುದರ್ಶನ್​ ಅವರನ್ನು ನಿಯೋಜಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸುದರ್ಶನ್​ ನೇಮಕ ರದ್ದುಗೊಳಿಸಿ ನಾಗೇಶ್​ ಅವರೇ ಮುಂದುವರಿಯುತ್ತಾರೆ ಎಂದು ಮತ್ತೊಂದು ಆದೇಶ ಹೊರಬಿದ್ದಿತ್ತು. ಮುಖ್ಯಮಂತ್ರಿಗಳಿಂದ ಅನುಮೋದಿತವಾಗಿದ್ದ ಆದೇಶ ಕೆಲವೇ ಗಂಟೆಗಳಲ್ಲಿ ರದ್ದಾಗಿದ್ದು ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಸರ್ಕಾರದೊಂದಿಗೆ ಮಾಜಿ ಸಿಎಂ ಎಚ್​ಡಿಕೆ ಅನ್ಯೂನ್ಯವಾಗಿದ್ದಾರೆ ಎಂಬ ಮಾತು ಕೇಳಿಬರುವ ಜೊತೆಗೆ, ಈ ವಿಚಾರ ಯೋಗೇಶ್ವರ್​ಗೆ ಮುಖಭಂಗ ಉಂಟು ಮಾಡಿತ್ತು.

    ದಿಢೀರ್​ ಬೆಳವಣಿಗೆ: ಕಳೆದ ಬಾರಿ ಸರ್ಕಾರ ಆದೇಶ ಬದಲಾದ ಹಿನ್ನೆಲೆಯಲ್ಲಿ ಈ ಬಾರಿ ವರ್ಗಾವಣೆ ವಿಚಾರವನ್ನು ಗುಪ್ತವಾಗಿಡಲಾಗಿತ್ತು. ವರ್ಗಾವಣೆ ಆದೇಶ ಹೊರಬೀಳುತ್ತಿದಂತೆ ಸುದರ್ಶನ್​ ದಿಢೀರ್​ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದರು. ವರ್ಗಾವಣೆ ಆದೇಶವನ್ನು ಕೊನೇ ಕ್ಷಣದವರೆಗೆ ರಹಸ್ಯವಾಗಿ ಇರಿಸಿದ್ದು ವಿಶೇಷವಾಗಿತ್ತು. ಸುದರ್ಶನ್​ ಅಧಿಕಾರ ಪಡೆಯುವವರೆಗೆ ವರ್ಗಾವಣೆ ಪತ್ರ ರಹಸ್ಯವಾಗೇ ಇತ್ತು. ಇನ್ನು ತಹಸೀಲ್ದಾರ್​ ನಾಗೇಶ್​ಗೂ ವರ್ಗಾವಣೆ ವಿಚಾರ ಗೊತ್ತಿಲ್ಲದೆ ಎಂದಿನಂತೆ ಫೀಲ್ಡ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುದರ್ಶನ್​ ಕಚೇರಿಗೆ ಆಗಮಿಸಿರುವ ವಿಚಾರ ತಿಳಿದ ನಾಗೇಶ್​ ಕಚೇರಿಯತ್ತ ಸುಳಿಯದಿರುವುದು ಕಂಡುಬಂದಿತ್ತು. ಆದರೆ, ತಹಸೀಲ್ದಾರ್​ ವಾಹನ ಮಾತ್ರ ಸಂಜೆ ಕಚೇರಿಗೆ ಆಗಮಿಸಿತ್ತು.

    ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

    ಇ-ಖಾತೆಯಲ್ಲಿ ಅಕ್ರಮ: ರಾಮನಗರದಲ್ಲಿ ಪಿಡಿಒ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts