More

    ಊರಿಗೆ ಊರೇ ಅನಾರೋಗ್ಯ ಪೀಡಿತ: ಡೋಲಿಯಲ್ಲಿ ರೋಗಿಗಳನ್ನು ಸಾಗಿಸುತ್ತಿದ್ದವರಿಗೂ ಜ್ವರ! ದೊಡ್ಡಾಣೆ ಗ್ರಾಮಸ್ಥರ ಗೋಳು ಕೇಳೋರಿಲ್ಲ

    ಚಾಮರಾಜನಗರ: ಇದೊಂದು ಕಾಡಂಚಿನಲ್ಲಿರುವ, ಸಮರ್ಪಕ ರಸ್ತೆ ಸೌಲಭ್ಯವಿಲ್ಲದ ಕುಗ್ರಾಮ. ಗ್ರಾಮಸ್ಥರ ಆರೋಗ್ಯ ಹದಗೆಟ್ಟರೆ ಡೋಲಿ ಕಟ್ಟಿಕೊಂಡು ಬೆಟ್ಟ ಹತ್ತಿ ಇಳಿದು ಆಸ್ಪತ್ರೆಗೆ ತಲುಪಬೇಕು. ಆದರೀಗ ಡೋಲಿ ಹೊರುವವರಿಗೂ ಜ್ವರ ಬಂದಿರುವ ಕಾರಣ, ಗ್ರಾಮದಲ್ಲಿ ಯಾರೊಬ್ಬರೂ ಚಿಕಿತ್ಸೆ ಪಡೆಯಲಾಗದೆ ಮನೆಯಲ್ಲೇ ಉಳಿದು ನೋವು ಅನುಭವಿಸುತ್ತಿದ್ದಾರೆ.

    ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ದೊಡ್ಡಾಣೆ ಎಂಬ ಗ್ರಾಮ ಇದೀಗ ಸಂಪೂರ್ಣ ಅನಾರೋಗ್ಯ ಪೀಡಿತವಾಗಿದೆ. ಬದಲಾದ ವಾತಾವರಣದಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗೆ ಗ್ರಾಮಸ್ಥರೆಲ್ಲ ಥಂಡ ಹೊಡೆದಿದ್ದಾರೆ. 60ರಿಂದ 70 ಜನರು ಜ್ವರ, ಶೀತ, ನೆಗಡಿ, ಕೆಮ್ಮು, ತಲೆನೋವು ಮತ್ತು ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ.

    ಅರಣ್ಯ ವ್ಯಾಪ್ತಿಯಲ್ಲಿರುವ ಕಾರಣ ದೊಡ್ಡಾಣೆ ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡಲು ಕಾನೂನು ಬಿಡುವುದಿಲ್ಲ. ಮಳೆಗೆ ಕುಸಿದ, ಬಿಸಿಲಿಗೆ ಬಿರುಕು ಬಿಟ್ಟ ಕಚ್ಚಾ ರಸ್ತೆಯೇ ಸಂಚಾರಕ್ಕೆ ಗಟ್ಟಿ. ಹೀಗಾಗಿ, ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯ. ಈ ಪರಿಸ್ಥಿತಿಯಲ್ಲಿ ಊರಿನಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಡೋಲಿ ಕಟ್ಟಿ ರೋಗಿಗಳನ್ನು ಹೊರಲಾಗುತ್ತದೆ. ಗ್ರಾಮದಿಂದ ಸುಮಾರು 12 ಕಿ.ಮೀ ನಡೆದುಕೊಂಡು ಎರಡು ಬೆಟ್ಟ ಹತ್ತಿ ಇಳಿದರೆ ಮಾರ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಗುತ್ತದೆ. ಒಬ್ಬ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಕನಿಷ್ಠ 10 ಜನರು ಶ್ರಮವಹಿಸುತ್ತಾರೆ. ಕಾಡುಪ್ರಾಣಿಗಳ ಭಯದ ನಡುವೆಯೂ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಗ್ರಾಮಸ್ಥರು ಒಬ್ಬರಿಗೊಬ್ಬರು ನೆರವಾಗುತ್ತಾ ಬಂದಿದ್ದು, ಪ್ರಸ್ತುತ ಗ್ರಾಮಸ್ಥರೆಲ್ಲರೂ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಸ್ಪತ್ರೆಗೆ ಹೋಗಲು ಯಾರಿಗೂ ಸಾಧ್ಯವಾಗದೆ ಮನೆಯಲ್ಲೇ ಇದ್ದಾರೆ.

    ಪ್ರಸ್ತುತ ಸಂದರ್ಭದಲ್ಲಿ ನಗರದ ನಿವಾಸಿಗಳು ಸಣ್ಣಪುಟ್ಟದ್ದಕ್ಕೂ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಮನೆಯಲ್ಲಿರುವ ಮಾತ್ರೆಗಳನ್ನು ನುಂಗಿ ಸ್ವಯಂ ಚಿಕಿತ್ಸೆಗೂ ಕೆಲವರು ಮುಂದಾಗಿದ್ದಾರೆ. ಆದರೆ ಕೋವಿಡ್ ಮೂರನೇ ಅಲೆಯ ಬಗ್ಗೆ ಅರಿವಿಲ್ಲದ, ಔಷಧಗಳನ್ನು ಇಟ್ಟುಕೊಳ್ಳದ ಕಾಡಂಚಿನ ಗ್ರಾಮ ದೊಡ್ಡಾಣೆಯ ಜನರು ಆಸ್ಪತ್ರೆಗೂ ಹೋಗಲಾಗದೆ ಆರೋಗ್ಯವನ್ನು ಸರಿಪಡಿಸಿಕೊಳ್ಳಲಾಗದೆ ಮನೆಯಲ್ಲೇ ಉಳಿದು ನೋವು ಪಡುತ್ತಿದ್ದಾರೆ.

    ವೃದ್ಧರು ಮನೆಯ ಪಡಸಾಲೆ ಮೇಲೆ ಚಳಿ ಜ್ವರ ತಾಳಲಾರದೆ ನಡುಗುತ್ತಾ ಮಲಗಿದ್ದಾರೆ. ಹಳ್ಳಿಗರಲ್ಲಿ ಹಲವರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಐದಾರು ದಿನಗಳಿಂದ ಗ್ರಾಮಸ್ಥರನ್ನು ವಿಪರೀತ ಜ್ವರ ಬಾಸುತ್ತಿದೆ. ನಮ್ಮೂರಿಗೆ ವೈದ್ಯರು ಬರುತ್ತಿಲ್ಲ. ಶುಶ್ರೂಷಕರನ್ನು ನೇಮಕ ಮಾಡಿರುವುದಾಗಿ ಕೇಳ್ಪಟ್ಟಿದ್ದೇವೆ. ಆದರೆ ಅವರೂ ಬಂದು ಔಷಧ ಕೊಡುತ್ತಿಲ್ಲ. ನಾವೇ ಆಸ್ಪತ್ರೆಗೆ ನಡೆದುಕೊಂಡು ಹೋಗಲು ಕಾಡುಪ್ರಾಣಿಗಳು ದಾಳಿ ಮಾಡುವ ಭಯವಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ದೊಡ್ಡಾಣೆ ಗ್ರಾಮದಲ್ಲಿ 60ರಿಂದ 70 ಜನರು ಜ್ವರದಿಂದ ಮಲಗಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಸೌಲಭ್ಯವಿಲ್ಲ. ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿ ಕಟ್ಟುಕೊಂಡು ಹೋಗುತ್ತಿದ್ದ ಪುರುಷರಿಗೂ ಆರೋಗ್ಯ ಹದಗೆಟ್ಟಿದೆ. ಗ್ರಾಮಕ್ಕೆ ವೈದ್ಯರು ಬರುವುದಿಲ್ಲ. ಜಿಲ್ಲಾಡಳಿತ ಸೂಚನೆ ಕೊಟ್ಟಿದ್ದರೂ ಅರಣ್ಯ ಇಲಾಖೆ ಜೀಪ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಈ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಲಾಗದ ಗ್ರಾಮಸ್ಥರು ದೇವರ ಮೇಲೆ ಭಾರ ಹಾಕಿ ಮನೆಯಲ್ಲೇ ಉಳಿದಿದ್ದಾರೆ.
    | ಗಣೇಶ್ ದೊಡ್ಡಾಣೆ ಗ್ರಾಮಸ್ಥ

    ದೊಡ್ಡಾಣೆ ಗ್ರಾಮಸ್ಥರು ಜ್ವರದಿಂದ ಬಳಲುತ್ತಿರುವುದು ಗೊತ್ತಾಗಿದೆ. ಈ ಹಳ್ಳಿಯ ರಸ್ತೆಯಲ್ಲಿ ಸಾಮಾನ್ಯ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯ ಜೀಪ್ ಅವಶ್ಯಕತೆ ಇದೆ. ಕೆಲ ದಿನಗಳ ಹಿಂದೆ ದೊಡ್ಡಾಣೆಗೆ ಹೋಗಲು ಅರಣ್ಯ ಇಲಾಖೆಯ ವಾಹನ ಕೋರಲಾಗಿತ್ತು. ಆದರೆ ಜೀಪ್‌ನ ಚಾಲಕನಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಹೋಗಲಾಗಿಲ್ಲ. ಆಸ್ಪತ್ರೆಗೆ ಬಂದಿದ್ದ ಗ್ರಾಮಸ್ಥರೊಬ್ಬರ ಕೈಯಲ್ಲಿ ಔಷಧಗಳನ್ನು ಕಳುಹಿಸಿಕೊಟ್ಟಿದ್ದೇನೆ. ಸದ್ಯದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುತ್ತೇನೆ.
    | ಡಾ.ರಾಜೇಶ್ ಪ್ರಾಥಮಿಕ ಆರೋಗ್ಯ ಕೇಂದ್ರ, ಮಾರ್ಟಳ್ಳಿ

    ದೊಡ್ಡಾಣೆ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ನಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು. ವೈದ್ಯರು ತಿಳಿಸಿದ ದಿನದಂದು ವಾಹನ ಸೌಲಭ್ಯ ಒದಗಿಸಿಕೊಡಲಾಗುವುದು.
    | ಏಡುಕೊಂಡಲು ಡಿಸಿಎಫ್, ಮಲೆಮಹದೇಶ್ವರ ವನ್ಯಜೀವಿಧಾಮ

    ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts