More

    ತೆಲಗಿ ರೈಲ್ವೆ ಸೇತುವೆ ಬಳಿ ಮುರಿದು ಬಿದ್ದ ರಾಡ್

    ಗೊಳಸಂಗಿ: ಸಮೀಪದ ತೆಲಗಿ (ಬಸವನಬಾಗೇವಾಡಿ ರೋಡ್) ರೈಲ್ವೆ ಸೇತುವೆ ಸುರಕ್ಷತೆ ಮತ್ತು ಲಾರಿ ಲೋಡ್ ಎತ್ತರ ನಿಯಂತ್ರಣಕ್ಕಾಗಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್ ಶುಕ್ರವಾರ ಬೆಳಗಿನ ಜಾವ ಕಿತ್ತು ಬಿದ್ದಿದ್ದು, ರಸ್ತೆ ಸಂಚಾರಕ್ಕೆ ನಾಲ್ಕು ತಾಸುಗಳ ಕಾಲ ವ್ಯತ್ಯಯವಾಗಿತ್ತು.

    ಬಸವನಬಾಗೇವಾಡಿ, ಕೂಡಗಿ ಎನ್‌ಟಿಪಿಸಿ, ಕೊಲ್ಹಾರ ಭಾಗಕ್ಕೆ ಸಂಚರಿಸುವ ವಾಹನ ಸವಾರರು ಪರಿತಪಿಸುವಂತಾಯಿತು. ಬೆಳಗಾಗುತ್ತಿದ್ದಂತೆಯೇ ಸ್ಥಳೀಯ ಜನತೆ ವಾಹನ ಸವಾರರ ಸಂಕಷ್ಟವನ್ನರಿತು ರಸ್ತೆಯ ಪಕ್ಕದಲ್ಲಿಯೇ ತಾತ್ಕಾಲಿಕ ಕಿರು ರಸ್ತೆ ನಿರ್ಮಿಸಿ ತುರ್ತು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೆಳಗ್ಗೆ 9ಕ್ಕೆ ರೈಲ್ವೆ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆ ಮಧ್ಯೆದಲ್ಲಿ ಬೃಹದಾಕಾರದಲ್ಲಿ ಬಿದ್ದಿದ್ದ ಕಬ್ಬಿಣದ ರಾಡನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಸುಗಮ ಸಂಚಾರ ಕಲ್ಪಿಸಿದರು.

    ಬಸವನಬಾಗೇವಾಡಿ, ಕೊಲ್ಹಾರ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಇದೇ ಮಾರ್ಗವಾಗಿ ನಿತ್ಯ ಸಹಸ್ರಾರು ಬೃಹತ್ ವಾಹನಗಳು ಸಂಚರಿಸುತ್ತವೆ. ಇನ್ನು ಸಕ್ಕರೆ ಕಾರ್ಖಾನೆಗಳಿಗೆ ಈ ಭಾಗದ ರೈತರ ಕಬ್ಬು, ಎನ್‌ಟಿಪಿಸಿ ವಿದ್ಯುತ್ ಉತ್ಪಾದನೆಯ ಘನತ್ಯಾಜ್ಯ ವಸ್ತು ಹಾರುಬೂದಿ ಸಾಗಾಟ ಕೂಡ ಇದೇ ಸೇತುವೆ ಬುಡದಲ್ಲಿಯೇ ಹಾಯ್ದು ಹೋಗಬೇಕು. ಅದೆಷ್ಟೋ ವೇಳೆ ರೈತರ ಕಬ್ಬು ಸೇತುವೆಗೆ ತಾಕಿ ತುಂಡರಿಸಿ ಕ್ವಿಂಟಾಲ್‌ಗಟ್ಟಲೇ ರಸ್ತೆ ಮೇಲೆಯೇ ಬಿದ್ದಿರುತ್ತದೆ. ಇದರಿಂದ ರೈತರಿಗೆ ತೂಕದಲ್ಲಿ ಹಾನಿಯಾದರೆ, ಬೈಕ್ ಸವಾರರು ರಸ್ತೆ ಮೇಲೆ ಬಿದ್ದಿರುವ ಆ ಕಬ್ಬನ್ನು ಗಮನಿಸದೇ ಅಪಘಾತ ಮಾಡಿಕೊಂಡಿರುವ ಉದಾಹರಣೆಯೂ ಇದೆ. ಆದ್ದರಿಂದ ಸಂಬಂಧಪಟ್ಟವರು 3.95 ಎತ್ತರವಿರುವ ಈ ರೈಲು ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು ಎಂದು ತೆಲಗಿ ಗ್ರಾಮದ ಅಶೋಕ ರಾಠೋಡ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts