More

    ಮುರಿದ ಸೇತುವೆ ಜನರ ಪರದಾಟ

    ಕಡಬ: ಆಲಂಕಾರು ಗ್ರಾಮದ ನೆಕ್ಕಿಲಾಡಿ ಎಂಬಲ್ಲಿನ ಕಿಂಡಿ ಅಣೆಕಟ್ಟು ಹಾಗೂ ಕಿರುಸೇತುವೆ ಎರಡು ವರ್ಷದ ಹಿಂದಿನ ಮಳೆಗಾಲದಲ್ಲಿ ಮುರಿದು ಹೋಗಿದ್ದು, ದುರಸ್ತಿಯಾಗದೆ ಈ ಭಾಗದ ಜನತೆ ಪರದಾಡುವಂತಾಗಿದೆ. ಮುರಿದು ಹೋದ ಸೇತುವೆ ಬಳಿ ನೂತನ ಸೇತುವೆ ಅಥವಾ ಹಳೆ ಸೇತುವೆಯನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ನೀಡಿದರೂ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಈ ಭಾಗದ ನಿವಾಸಿಗಳಿಂದ ಕೇಳಿಬರುತ್ತಿದೆ.

    ನೆಕ್ಕಿಲಾಡಿಯಲ್ಲಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟೆಯಲ್ಲಿ ಬೇಸಿಗೆಯಲ್ಲಿ ಸಂಗ್ರಹವಾಗುತ್ತಿದ್ದ ನೀರನ್ನು ಈ ಭಾಗದ ಕೃಷಿಕರು ತಮ್ಮ ಕೃಷಿ ಕಾಯಕಗಳಿಗೆ ಬಳಸುತ್ತಿದ್ದರು. ಈಗ ಅಣೆಕಟ್ಟು ಮುರಿದು ಹೋದ ಪರಿಣಾಮ ಎರಡು ವರ್ಷದಿಂದ ಬೇಸಿಗೆಯ ಜೀವಜಲ ಪೋಲಾಗುತ್ತಿದೆ. ಮಾತ್ರವಲ್ಲದೆ ಮಳೆಗಾಲದಲ್ಲಿ ಗಾಣಂತಿ, ನಡ್ಜೀರು, ಕಣಿಪುರ, ಪಜ್ಜಾಪು ಶರವೂರಿನ ಕೆಲವು ಭಾಗಗಳ ಸುಮಾರು ಐವತ್ತು ಮನೆಗಳ ಜನರು ಆಲಂಕಾರು ಪೇಟೆಗೆ ಹಾಗೂ ಕುಂಡಾಜೆ ಶಾಲೆಯನ್ನು ಸಂಪರ್ಕಿಸಲು ಆಲಂಕಾರು ಭಾಗದ ಕಿನ್ನಿಗೋಳಿ ಮುಖಾಂತರ ಸುಮಾರು ಐದು ಕಿಲೋ ಮೀಟರ್ ಸುತ್ತು ಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಮುಖ್ಯವಾಗಿ ಕುಂಡಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳು, ಸ್ಥಳೀಯಾಡಳಿತದ ಅಧಿಕಾರಿಗಳು, ಸ್ಥಳೀಯಾಡಳಿತದ ಆಡಳಿತ ವೃಂದ ಜಲಾನಯನ ಇಲಾಖಾಧಿಕಾರಿಗಳು ಅಂದು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ.

    ಎರಡು ವರ್ಷದ ಹಿಂದಿನ ಮಳೆಯ ಆರ್ಭಟಕ್ಕೆ ನಮ್ಮ ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಕುಸಿತ ಉಂಟಾಗಿ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ ಹೋದವರು ಮತ್ತೆ ಇತ್ತ ಮುಖ ಮಾಡಿಲ್ಲ. ನಾವು ತಾತ್ಕಾಲಿಕವಾಗಿ ಸ್ಲ್ಯಾಬ್ ಮುರಿದು ಹೋದ ಭಾಗಕ್ಕೆ ಅಡಕೆ ಮರದ ತುಂಡುಗಳನ್ನು ಇಟ್ಟು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದೇವೆ. ಇದು ಮಳೆಗಾಲಕ್ಕೆ ಅಪಾಯಕಾರಿ. ಆದ್ದರಿಂದ ತಕ್ಷಣ ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಅಥವಾ ದುರಸ್ತಿಗಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
    ಉಮೇಶ್ ಗೌಡ, ನೆಕ್ಕಿಲಾಡಿ, ಸ್ಥಳೀಯರು

    ಕಿಂಡಿ ಅಣೆಕಟ್ಟೆಯ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿ ಸಂಬಂಧಪಟ್ಟವರಿಗೆ ವರದಿ ನೀಡಿದ್ದೇವೆ. ಗ್ರಾಪಂನಿಂದ ನೂತನ ಸೇತುವೆ ಅಥವಾ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಾಧ್ಯವಿಲ್ಲ. ನೂತನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಜಗನ್ನಾಥ್ ಶೆಟ್ಟಿ, ಆಲಂಕಾರು ಪಿಡಿಒ

    ಜಲಾನಯನ ಇಲಾಖೆ ವತಿಯಿಂದ ನಿರ್ಮಾಣವಾದ ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಹಾನಿಯಾಗಿರುವುದರ ಬಗ್ಗೆ ಪರಿಶೀಲಿಸಲಾಗಿದೆ. ಈ ಬಗ್ಗೆ ಇಲಾಖೆಗೆ ವರದಿ ನೀಡಿದ್ದೇವೆ. ನೆಕ್ಕಿಲಾಡಿಯಲ್ಲಿ ಮತ್ತೆ ಸೇತುವೆ ನಿರ್ಮಾಣ ಮಾಡುವಷ್ಟು ಅನುದಾನ ಜಲಾನಯನ ಇಲಾಖೆಯಿಂದ ಸಿಗುವುದು ಕಷ್ಟ. ಸಣ್ಣ ನೀರಾವರಿ ಇಲಾಖೆ ಮುಖಾಂತರ ಅಲ್ಲಿಗೆ ನೂತನ ಸೇತುವೆ ನಿರ್ಮಾಣ ಮಾಡಬಹುದು. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಸೇತುವೆಯ ದುರಸ್ತಿಗೆ ಅನುದಾನ ಒದಗಿಸುವಲ್ಲಿ ಪ್ರಯತ್ನಿಸಬೇಕಾಗಿದೆ.
    ತಿಮ್ಮಪ್ಪ ಗೌಡ, ಕೃಷಿ ಅಧಿಕಾರಿ ಹಾಗೂ ಜಲಾನಯನ ಅಧಿಕಾರಿ, ಕಡಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts