More

    ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

    ಸಿದ್ದಾಪುರ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು.

    ಗ್ರಾಮಸ್ಥ ಸೌಕತ್ ಅಲಿ ಮಾತನಾಡಿ, ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯೊಂದು ನೂರಾರು ಎಕರೆ ಕಾಫಿ ತೋಟವನ್ನು ಬೇರೆಯೊಂದು ಖಾಸಗಿ ಸಂಸ್ಥೆಗೆ ಇತ್ತೀಚೆಗೆ ಮಾರಾಟ ಮಾಡಿದೆ. ಇದನ್ನು ಖಾಸಗಿ ವ್ಯಕ್ತಿಗಳು ಖರೀದಿಸಿ ತೋಟವನ್ನು ನಿವೇಶನವಾಗಿ ಹಂಚಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ನಿವೇಶನ ಖರೀದಿಸುವವರಿಗೆ ಗ್ರಾಮ ಪಂಚಾಯಿತಿ ಮೂಲಕ ಮೂಲ ಸೌಕರ್ಯ ಒದಗಿಸುವ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳನ್ನು ನಿವೇಶನವಾಗಿ ಮಾಡಿ ಆ ಜಾಗಕ್ಕೆ ನಮೂನೆ 9-11 ದಾಖಲೆಗಳನ್ನು ಪಂಚಾಯಿತಿಗಳಿಂದ ನೀಡಬಾರದೆಂದು ಒತ್ತಾಯಿಸಿದರು.

    ಗ್ರಾಪಂ ಮಾಜಿ ಅಧ್ಯಕ್ಷ ವಿ.ಕೆ.ಬಷೀರ್ ಮಾತನಾಡಿ, ಇಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ. ಈ ಹಿಂದೆ ಜಾಗ ಖರೀದಿಸಲೆಂದು ಜಿಲ್ಲಾಧಿಕಾರಿ ಕಚೇರಿಗೆ ಗ್ರಾಮ ಪಂಚಾಯಿತಿ ಮೂಲಕ ಹಣ ಪಾವತಿಸಲಾಗಿದೆ. ಆದರೂ ಈವರೆಗೂ ಜಾಗ ಸಿಕ್ಕಿಲ್ಲ ಎಂದರು.

    ಕಾರ್ಮಿಕ ಮುಖಂಡ ಎಚ್.ಬಿ.ರಮೇಶ್ ಮಾತನಾಡಿ, ಈ ಹಿಂದೆ ದೊಡ್ಡ ಸಂಸ್ಥೆಯೊಂದರ ಅಧೀನದಲ್ಲಿದ್ದ ನೂರಾರು ಎಕರೆ ಕಾಫಿ ತೋಟಗಳನ್ನು ಖಾಸಗಿ ಸಂಸ್ಥೆಯೊಂದಕ್ಕೆ ಮಾರಾಟ ಮಾಡುವ ಸಂದರ್ಭ ಕಾರ್ಮಿಕರು ಹಾಗೂ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದರಿಗೆ ಅದೇ ತೋಟಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದೆಂದು ತಿಳಿಸಿದ್ದರು. ಆದರೆ ಇದೀಗ ತೋಟ ಖರೀದಿಸಿದ ಸಂಸ್ಥೆಯವರು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ ನೀಡದೆ ಏಕಾಏಕಿ ಹೊರ ಹಾಕುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ ಎಂದರು.

    ಅಂಬೇಡ್ಕರ್ ನಗರದಲ್ಲಿ ಮನೆ ನಿರ್ಮಿಸಲು ಕ್ರಮ ವಹಿಸಬೇಕು. ಸಿದ್ದಾಪುರ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳಿಗೆ ಆಟವಾಡಲು ಮೈದಾನ ಗುರುತಿಸಬೇಕು. ಜತೆಗೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು. ಅಲ್ಲದೆ ಗ್ರಾಮ ಪಂಚಾಯಿತಿ ಸಮೀಪದಲ್ಲಿದ್ದ ಹಳೇ ಕಾಲದ ತೆರೆದ ಬಾವಿಯನ್ನು ಮುಚ್ಚಲಾಗಿದ್ದು, ಅದನ್ನು ತೆರೆಯಬೇಕು. 2019ರ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಕಳೆದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಲೆಕ್ಕ ಪರಿಶೋಧನಾ ಸಭೆಯಲ್ಲಿ ತಿಳಿದು ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂತು.

    ಗ್ರಾಮ ಪಂಚಾಯಿತಿ ಸದಸ್ಯ ವಿ.ಕೆ.ಜಾಫರ್ ಆಲಿ ಮಾತನಾಡಿ, ಕೆಲ ಗ್ರಾಪಂ ಸದಸ್ಯರು ನಮೂನೆ 9-11 ದಾಖಲಾತಿಗಳನ್ನು ಮಾಡಿಸಿ ಕೊಡಲು 20,000 ರೂ.ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

    ಕಾಯಂ ಪಿಡಿಒ ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರಲ್ಲದೆ, ಟ್ರಾಫಿಕ್ ಸಮಸ್ಯೆ, ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದರು.

    ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಜಿಪಂ ಸಿಇಒ ವರ್ಣಿತ್ ನೇಗಿ, ವಸತಿ ಯೋಜನೆಯ ಫಲಾನುಭವಿಗಳು ಜಿ.ಪಿ.ಎಸ್. ಮಾಡುವ ಸಂದರ್ಭದಲ್ಲಿ ಅಗತ್ಯ ದಾಖಲೆ ನೀಡಬೇಕು. ಮನೆ ಗುರುತಿಸಿದ ಸ್ಥಳದಲ್ಲೇ ನಿರ್ಮಾಣ ಮಾಡಬೇಕು. ಫಲಾನುಭವಿಗಳು ಮೃತಪಟ್ಟಲ್ಲಿ ವಾರಸುದಾರರ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಹಣ ಮಂಜೂರಾತಿ ಮಾಡಬೇಕು ಎಂದು ಪಿಡಿಒಗೆ ಸೂಚಿಸಿದರು.

    ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯ ಮೂಲಕ ಜಾಗ ಪಡೆಯಲು ಈಗಾಗಲೇ ಚರ್ಚೆ ನಡೆಯುತ್ತಿದೆ. ಕಸವನ್ನು ಯಂತ್ರ ಬಳಸಿ ಬೇರ್ಪಡಿಸಲಾಗುವುದು. ಸಂತ್ರಸ್ತರಿಗೆ ಪುರ್ನವಸತಿ ಜಾಗದ ವಿಚಾರದ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.
    ಇದೇ ವೇಳೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಮೃತಕೆರೆ, ಗುಹ್ಯ ಅಂಗನವಾಡಿ ಕೇಂದ್ರಗಳಿಗೆ ಸಿಇಒ ಭೇಟಿ ನೀಡಿ ಪರಿಶೀಲಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಳಣಿಸ್ವಾಮಿ, ಪಿಡಿಒ ಸೆಫೀಕ್, ಕಾರ್ಯದರ್ಶಿ ಮೋಹನ್ ಹಾಜರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts