ಮೇದಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೊನಾ ಸೋಂಕಿನಿಂದ ಗುಣವಾಗಲೆಂದು ಸರಿಯಾಗಿ ನಿದ್ರಿಸದೇ ಉಪವಾಸ ವ್ರತದೊಂದಿಗೆ ಪ್ರಾರ್ಥನೆ ಮಾಡುತ್ತಿದ್ದ ತೆಲಂಗಾಣದ ಟ್ರಂಪ್ ಅಭಿಮಾನಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.
ಬುಸ್ಸಾ ಕೃಷ್ಣ ರಾಜು ಮೃತ ಟ್ರಂಪ್ ಅಭಿಮಾನಿ. ಟ್ರಂಪ್ ಅವರಿಗೆ ಕರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ರಾಜು ಆಘಾತಕ್ಕೆ ಒಳಗಾಗಿದ್ದರು ಎಂದು ಅವರ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪತ್ತೆ..!
ರಾಜು ಅವರು ಟ್ರಂಪ್ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದರು. ದಿನನಿತ್ಯ ಪ್ರಾರ್ಥನೆ ಸಲ್ಲಿಸುವುದಕ್ಕಾಗಿಯೇ ಕಳೆದ ವರ್ಷ ತಮ್ಮ ಮನೆಯ ಮುಂದೆ ಟ್ರಂಪ್ ಅವರ 6 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು. ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಕರೊನಾ ತಗುಲಿದೆ ಎಂಬ ಸುದ್ದಿ ಕೇಳಿದಾಗಿನಿಂದ ದುಃಖದಲ್ಲಿದ್ದರು. ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ ಮತ್ತು ಉಪವಾಸವಿದ್ದು, ಟ್ರಂಪ್ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟರು ಎಂದು ಆಪ್ತರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಭಾರತದಲ್ಲಿ ಐದೇ ವರ್ಷದಲ್ಲಿ ಡಿಜಿಟಲ್ ಪಾವತಿ ಆರು ಪಟ್ಟು ಹೆಚ್ಚಳ: ಲಾಕ್ಡೌನ್ನಲ್ಲೂ ಭಾರಿ ಏರಿಕೆ!