ವಾಷಿಂಗ್ಟನ್: ಮಕ್ಕಳಿಗೆ ಮುತ್ತು ಕೊಡುವ ಮುನ್ನ ಯೋಚಿಸಿ ಎಂದು ಐದು ವರ್ಷದ ಮಗುವಿನ ತಾಯಿಯೊಬ್ಬರು ಎಚ್ಚರಿಕೆ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ. ಚರ್ಮರೋಗದಿಂದ ತನ್ನ ಮಗುವಿನ ಜೀವಕ್ಕೆ ಕಂಟಕ ಎದುರಾದ ಹಿನ್ನೆಲೆಯಲ್ಲಿ ಮಹಿಳೆ ಜನರಿಗೆ ಈ ಸಲಹೆಯನ್ನು ನೀಡಿದ್ದಾರೆ.
ಅಮೆರಿಕದ ಕೇಂದ್ರ ಪೆನ್ಸಿಲ್ವೇನಿಯಾ ನಿವಾಸಿ ಸ್ಟೆಫನೈ ಶ್ಯಾಡೆ(32) ಎಂಬುವರ ಐದು ವರ್ಷದ ಲಿಂಕನ್ಗೆ ಹರ್ಪಸ್ ಸಿಂಪ್ಲೆಕ್ಸ್ ವೈರಸ್(ಎಚ್ಎಸ್ವಿ-1) ತಗುಲಿ, ಜೀವಕ್ಕೆ ಕಂಟಕವಾಗುವಂತಹ ಚರ್ಮ ರೋಗದ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ನೋವುಕಾರಕ ಹುಣ್ಣುಗಳು ಮಗುವಿನ ಮುಖದಲ್ಲಿ ಹರಡಿಕೊಂಡಿತ್ತು. ಜ್ವರದ ಗುಳ್ಳೆಗಳನ್ನು ಹೊಂದಿದ್ದ ವ್ಯಕ್ತಿಯ ಮುತ್ತಿನಿಂದ ಮಗುವಿಗೆ ಈ ರೀತಿಯಾಗಿದೆ ಎಂದು ವೈದ್ಯರ ಪರಿಶೀಲನೆಯ ಬಳಿಕ ಮಗುವಿನ ತಾಯಿ ಹೇಳಿಕೊಂಡಿದ್ದಾರೆ.
ಮಗುವಿನ ಮುಖದಲ್ಲಿ ಹುಣ್ಣುಗಳಿರುವುದನ್ನು ಕಳೆದ ತಿಂಗಳು ತಂದೆ-ತಾಯಿ ಗಮನಿಸಿದ್ದರು. ಕೆಲವೇ ದಿನಗಳಲ್ಲಿ ಮುಖದ ಒಂದು ಭಾಗ ಹುಣ್ಣುಗಳಿಂದ ಆವರಿಸ ತೊಡಗಿತು. ಕೆಂಪು ಬಣ್ಣದ ಹುಣ್ಣುಗಳು ತುಂಬಾ ನೋವುಕರವಾಗಿದ್ದವು. ಇದರಿಂದ ಮಗು ಆಗಾಗ ಅಳುತ್ತಿತ್ತು ಎಂದು ಪಾಲಕರು ಹೇಳಿದ್ದಾರೆ.
ಬಳಿಕ ವೈದ್ಯರ ಬಳಿ ಕರೆದೊಯ್ದದಾಗ ಎಚ್ಎಸ್ವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕು ತಗುಲಿದ ಬೇರೊಬ್ಬರು ಮುತ್ತು ನೀಡಿರುವುದರಿಂದ ಎಚ್ಸಿವಿ ಹರಡಿದೆ ಎಂದು ಹೇಳಿ, ಅದನ್ನು ಹಾಗೇ ಬಿಟ್ಟರೆ ಮಗುವಿನ ಜೀವಕ್ಕೆ ಅಪಾಯವಾಗಬಹುದು ಎಂದು ವೈದ್ಯರು ತಿಳಿಸಿದಾಗ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ.
ವೈದ್ಯರ ಸಲಹೆ ಮೇರೆಗೆ ರೋಗನಿರೋಧಕ ಕ್ರೀಮ್ ಅನ್ನು ಪ್ರತಿನಿತ್ಯ ಹುಣ್ಣುಗಳ ಮೇಲೆ ಹಚ್ಚುತ್ತಾ ಬಂದಿದ್ದರಿಂದ ತಿಂಗಳ ನಂತರ ಮಗುವಿಗೆ ಸೋಂಕು ನಿವಾರಣೆ ಆಯಿತು ಎಂದು ಪಾಲಕರು ತಿಳಿಸಿದ್ದಾರೆ. (ಏಜೆನ್ಸೀಸ್)
ಆಹಾರ ಆರೋಗ್ಯ: ಅರಿಶಿಣ ಬೆರೆಸಿದ ಹಾಲಿನ ಹಲವು ಪ್ರಯೋಜನಗಳು
ಯೋಗಕ್ಷೇಮ: ಕಫನಾಶಕ ಯೋಗಮುದ್ರೆಗಳಿಂದಾಗುವ ಉಪಯೋಗಗಳಿವು…