ಹುಬ್ಬಳ್ಳಿ : ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ಅವರು ನಗರದ ಕಮರಿಪೇಟೆಯಲ್ಲಿ ಬುಧವಾರ ಮತಯಾಚನೆ ನಡೆಸಿದರು.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಜ್ಯೋತಿ ಜೋಶಿ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ಜೋಶಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಮಹಿಳೆಯರ ಸಶಕ್ತಿಕರಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ಮಹತ್ತರ ನಿರ್ಧಾರ ಮತ್ತು ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಮೂಲಕ ಮಹಿಳೆಯರಿಗೆ ಸ್ವಾವಲಂಬನೆಯ ಜೀವನ ಕಲ್ಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ದೇಶದ ಸುರಕ್ಷತೆ ಜತೆಗೆ ಮಹಿಳೆಯರ ಆರ್ಥಿಕ ಸಬಲತೆಗಾಗಿ ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸಬೇಕು. ಪ್ರಹ್ಲಾದ ಜೋಶಿ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಸದಸ್ಯೆ ಪ್ರೀತಿ ಲದವಾ, ಮುಖಂಡರಾದ ರಾಜಶ್ರೀ ಜಡಿ ಹಾಗೂ ಇತರರು ಹಾಜರಿದ್ದರು.