ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, “ಏರ್ಪೋರ್ಟ್ ಸಿಟಿ ಮೆಟ್ರೋ ನಿಲ್ದಾಣ’ದ ನಿರ್ಮಾಣಕ್ಕೆ ಪೂರ್ವ ಅರ್ಹತಾ ಗುತ್ತಿಗೆಯನ್ನು ಬಿಐಎಎಲ್ ಆಹ್ವಾನಿಸಿದೆ.
ವಿಮಾನ ನಿಲ್ದಾಣದ ರ್ಟಮಿನಲ್ಗೆ 2.6 ಕಿ.ಮೀ. ದೂರದಲ್ಲೇ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಇದು 14 ಸಾವಿರ ಚದರ ಕಿಮೀ ವಿಸ್ತೀರ್ಣ ಹೊಂದಿರಲಿದ್ದು, ಅತ್ಯಾಧುನಿಕ ವಿನ್ಯಾಸದಲ್ಲಿ ತಲೆಯೆತ್ತಲಿದೆ. ಗುತ್ತಿಗೆದಾರರ ನೇಮಕಕ್ಕೆ ಬಿಐಎಎಲ್ ಎರಡು ಹಂತದ ಪ್ರಕ್ರಿಯೆ ಜಾರಿಗೆ ತಂದಿದೆ. ಪೂರ್ವ ಅರ್ಹತಾ ಹಂತದಲ್ಲಿ ಸಲ್ಲಿಸಿದ ಬಿಡ್ಗಳನ್ನು ಮೊದಲು ಪರಿಶೀಲಿಸಲಾಗುತ್ತದೆ. ಬಳಿಕ ಅರ್ಹ ಸಂಸ್ಥೆಗಳಿಗೆ ಟೆಂಡರ್ ಹಂತಕ್ಕೆ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.
ಕಾಮಗಾರಿ ವೇಗ
ನಗರದ ರೇಷ್ಮೆ ಮಂಡಳಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕಾಮಗಾರಿಯನ್ನು ಮೂರು ಸಂಸ್ಥೆಗಳು ನಿರ್ವಹಿಸುತ್ತಿವೆ. 2026ರ ಜೂನ್ ವೇಳೆ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಹಾಕಿಕೊಂಡಿದೆ.
39 ಕಿ.ಮೀ. ಉದ್ದದ ಮಾರ್ಗ
ನೀಲಿ ಮಾರ್ಗವು ಕೇಂದ್ರೀಯ ರೇಷ್ಮೆ ಮಂಡಳಿ-ಕೆ.ಆರ್.ಪುರ-ಹೆಬ್ಬಾಳ ಮೂಲಕ ಕೆಐಎ ಸಂಪರ್ಕಿಸುತ್ತದೆ. ಒಟ್ಟು 39 ಕಿ.ಮೀ. ಉದ್ದದ ಈ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ರೇಷ್ಮೆ ಮಂಡಳಿ& ಕೆ.ಆರ್. ಪುರ ಮಾರ್ಗದ “2ಎ’ ಸಂಪೂರ್ಣ ನಗರದೊಳಗೆ ಹಾದುಹೋಗಬೇಕಿರುವ ಕಾರಣ ಕಾಮಗಾರಿ ಸ್ವಲ್ಪಮಟ್ಟಿಗೆ ನಿಧಾನಗೊಂಡಿದೆ. ಕೆ.ಆರ್.ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಐಎ ತಲುಪುವ “2ಬಿ’ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರ ವೆಚ್ಚ ಸುಮಾರು 14,778 ಕೋಟಿ ರೂ.ಗಳು.
ಪ್ರಯಾಣಿಕರಿಗೆ ಲಾಭ
ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ ಆ ಭಾಗದಲ್ಲಿನ ವಾಹನದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲಿದೆ. ಪ್ರಸ್ತುತ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್, ಸ್ವಂತ ವಾಹನ ಹಾಗೂ ಬಿಎಂಟಿಸಿ ವೋಲ್ವೋ ಬಸ್ ಅವಲಂಬಿಸಿರುವ ಪ್ರಯಾಣಿಕರು, ಮುಂದಿನ ದಿನಗಳಲ್ಲಿ ಮೆಟ್ರೋ ಅವಲಂಬಿಸುವುದರಲ್ಲಿ ಅನುಮಾನವಿಲ್ಲ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.