More

    ಉದ್ಯೋಗ ಪಡೆಯಲು ಬೇಕು ಅಗತ್ಯ ಕೌಶಲ

    ದಾವಣಗೆರೆ : ಉದ್ಯೋಗ ಸಿಗುವುದಿಲ್ಲ ಎಂಬ ಮನಸ್ಥಿತಿಯಿಂದ ಹೊರಬಂದು, ಅಗತ್ಯ ಕೌಶಲಗಳನ್ನು ಬೆಳೆಸಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಸಲಹೆ ನೀಡಿದರು.
     ನಗರದ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
     ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಮುಂತಾದ ಯೋಜನೆಗಳಿಂದಾಗಿ ಪ್ರತಿ ವರ್ಷ ಲಕ್ಷಾಂತರ ಉದ್ಯೋಗಗಳು ದೊರೆಯುತ್ತಿವೆ. ಕಾರ್ಪೊರೇಟ್ ಕಂಪನಿಗಳಲ್ಲಿಯೂ ಬಹಳಷ್ಟು ಹುದ್ದೆಗಳು ಖಾಲಿ ಇರುತ್ತವೆ ಎಂದು ತಿಳಿಸಿದರು.
     ಎಲ್ಲರಿಗೂ ಉದ್ಯೋಗ ನೀಡಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಉದ್ದೇಶ. ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ಕೌಶಲ ತರಬೇತಿಗೆ ವಿವಿಧ ಕೋರ್ಸ್‌ಗಳು ಲಭ್ಯವಿದ್ದು, ವಿದ್ಯಾರ್ಥಿಗಳು ವಿಷಯವಾರು ಆಯ್ಕೆ ಮಾಡಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
     ಶ್ರೀಶೈಲ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಜಿ.ಎಸ್. ಅನಿತ್ ಕುಮಾರ್ ಮಾತನಾಡಿ, ಐಟಿ, ಕೈಗಾರಿಕೆ ಹಾಗೂ ಬ್ಯಾಂಕಿಂಗ್ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು, ನೀವು ಇಷ್ಟಪಡುವ, ನಿಮ್ಮನ್ನು ಇಷ್ಟಪಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ನೀಡಿದರು.
     ಟ್ರಸ್ಟ್‌ನ ಕಾರ್ಯದರ್ಶಿ ಜಿ.ಎಂ. ಲಿಂಗರಾಜು, ಜಿ.ಎಸ್. ರಾಜೀವ್, ಮಾಜಿ ಶಾಸಕ ಪ್ರೊ.ಲಿಂಗಣ್ಣ, ಪ್ರಾಚಾರ್ಯೆ ಶ್ವೇತಾ ಮರಿಗೌಡರ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಸಂಜಯ್ ಪಾಂಡೆ, ಉಪ ಮೇಯರ್ ಯಶೋದಾ, ಮಾಜಿ ಉಪ ಮೇಯರ್ ಗಾಯತ್ರಿಬಾಯಿ, ಬಿಜೆಪಿ ಮುಖಂಡರಾದ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಎಚ್.ಎಸ್. ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಚಂದ್ರಶೇಖರ್ ಪೂಜಾರ್, ತೇಜಸ್ವಿ ಕಟ್ಟಿಮನಿ ಇದ್ದರು.
     ಉದ್ಯೋಗ ಮೇಳದಲ್ಲಿ 38 ಕಂಪನಿಗಳು ಭಾಗವಹಿಸಿದ್ದು, 1,300 ಮಂದಿಗೆ ಉದ್ಯೋಗದ ಭರವಸೆ ಸಿಕ್ಕಿದೆ ಎಂದು ತಿಳಿದುಬಂದಿದೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts