More

    ಶಿವಲಿಂಗೇಂದ್ರ ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ನಾಳೆ : 60 ವರ್ಷ ತುಂಬಿದ ಹಿನ್ನೆಲೆ ಭಕ್ತ ವೃಂದದಿಂದ ಆಯೋಜನೆ


    • ಚಾಮರಾಜನಗರ : ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಪಡಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಅವರಿಗೆ 60ನೇ ವರ್ಷ ತುಂಬಿದ ಅಂಗವಾಗಿ ಮೇ 25ರಂದು ಭಕ್ತವೃಂದದಿಂದ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
    • ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರತಿಷ್ಠಿತ ಸ್ಥಾನ ಹೊಂದಿರುವ ಶ್ರೀಮಠವು 500 ವರ್ಷಗಳ ಇತಿಹಾಸ ಹೊಂದಿದ್ದು ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶ್ರೀಮಠದ ಅಧ್ಯಕ್ಷರಾದ ಶಿವಲಿಂಗೇಂದ್ರ ಸ್ವಾಮೀಜಿ ಅವರು 1963 ಏ.23 ರಂದು ಮೂಡಗೂರಿನ ಎಂ.ಎಸ್. ಚನ್ನಬಸವದೇವರು ಹಾಗೂ ಶಿವನಂಜಮ್ಮ ಅವರ ಪುತ್ರನಾಗಿ ಜನಿಸಿದ್ದರು. ಪೂರ್ವಾಶ್ರಮದಲ್ಲಿ ಎಂ.ಸಿ. ಮಹೇಶ್ ಎಂಬ ಹೆಸರು ಶ್ರೀಗಳಿಗೆ ಇತ್ತು. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ಪಡೆದಿದ್ದರು.

    • 1987ರಲ್ಲಿ ಮಠದ ಮದ್ದಾನೇಶ್ವರರ ಗದ್ದುಗೆಯ ಕಳಸಾರೋಹಣ ಕಾರ್ಯಕ್ರಮದ ಜತೆಗೆ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿದ್ಧಗಂಗೆಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮೀಜಿ ಭಾಗವಹಿಸಿದ್ದರು.
    • 1995ರಲ್ಲಿ ಮಠದ ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ನಂತರ ಸ್ವತಂತ್ರ ಹಾಗೂ ಸಮರ್ಥವಾಗಿ ಮಠವನ್ನು ಮುನ್ನಡೆಸುತ್ತ ಬಂದಿದ್ದಾರೆ. ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರಡಿಯಲ್ಲಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಗದ್ದುಗೆ ಪ್ರಸಾದ ನಿಲಯ, ಅತಿಥಿಗೃಹ, ಇತ್ತೀಚೆಗೆ ಹಿರಿಯರ ಮನೆ(ವೃದ್ದಾಶ್ರಮ) ಪ್ರಾರಂಭಿಸಿ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿ ಅರಸಿ ಬರುವ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

    • ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಗಳಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಡಗೂರು ಗ್ರಾಮಸ್ಥರು, ಮಠದ ಭಕ್ತರು, ಅಭಿಮಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಸೇರಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

    • ಗುರುವಾರ ಪಡಗೂರು ಮಠದ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ವಹಿಸಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮೈಸೂರು ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲನಮೂಲೆಯ ಶ್ರೀ ಚನ್ನಬಸವ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು ಭಾಗವಹಿಸಲಿದ್ದಾರೆ.

    • ಮೇ 24ರ ಬುಧವಾರ ರಾತ್ರಿ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಬದನವಾಳು ಶ್ರೀ ಶಿವಕುಮಾರಶಾಸ್ತ್ರಿ ಅವರಿಂದ ಶಿವಕಥಾ ಕಾಲಕ್ಷೇಪ ಆಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts