More

    ಅಡಕೆ ತೋಟದಲ್ಲಿ ಅರಳಿತು ಪೇರಲ, ಶಿಕ್ಷಕ ಅಬ್ದುಲ್​ಖಾದರಖಾನ ಸಾಧನೆ

    ಗಿರೀಶ ದೇಶಪಾಂಡೆ ಹಾನಗಲ್ಲ

    ಅಡಕೆ ತೋಟದಲ್ಲಿ ಶುಂಠಿ, ಅರಿಷಿಣ, ಗೋವಿನಜೋಳ ಬೆಳೆಯುವುದು ಸಾಮಾನ್ಯ. ಆದರೆ, ತಾಲೂಕಿನ ರೈತರೊಬ್ಬರು ಅಡಕೆ ಮಧ್ಯದಲ್ಲಿ ಪೇರಲ ಗಿಡ ಬೆಳೆದು ಗಮನ ಸೆಳೆಯುತ್ತಿದ್ದಾರೆ.

    ಅರೆಮಲೆನಾಡು ಪ್ರದೇಶವಾದ ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಅಬ್ದುಲ್​ಖಾದರಖಾನ ಮುಲ್ಲಾ ಎಂಬ ರೈತ ತನ್ನ ಎರಡು ಎಕರೆ ಪ್ರದೇಶದಲ್ಲಿ ಅಡಕೆ ತೋಟ ಬೆಳೆಸಿದ್ದಾರೆ. ಅಡಕೆ ಫಲ ಕೊಡಲು ಇನ್ನೂ ಮೂರ್ನಾಲ್ಕು ವರ್ಷಗಳು ಬೇಕು. ಈ ಅವಧಿಯಲ್ಲಿ ಉತ್ಪನ್ನ ತೆಗೆಯುವ ಹಿನ್ನೆಲೆಯಲ್ಲಿ ಹೆಚ್ಚು ಫಲ ಕೊಡುವ ಯಾವುದಾದರೊಂದು ಹಣ್ಣಿನ ಗಿಡಗಳನ್ನು ನೆಡಲು ಅಬ್ದುಲ್​ಖಾದರಖಾನ ಮುಲ್ಲಾ ಮುಂದಾದರು. ಆಗ ಅವರಿಗೆ ಕಾಣಿಸಿದ್ದು ಪೇರಲ.

    ವೃತ್ತಿಯಲ್ಲಿ ಶಿಕ್ಷಕ-ಪ್ರವೃತ್ತಿಯಲ್ಲಿ ರೈತ:

    ಅಬ್ದುಲ್​ಖಾದರಖಾನ ತಾಲೂಕಿನ ಅರಳೇಶ್ವರದ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೋಟಗಾರಿಕೆಯ ಬಗೆಗೆ ಆಸಕ್ತಿ ಹೊಂದಿರುವ ಅವರು, ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ ವರ್ಷವಿಡೀ ಫಲ ಕೊಡುವ ಪೇರಲ(ಸೀಬೆ) ಗಿಡಗಳನ್ನು 2020ರಲ್ಲಿ ನೆಟ್ಟರು. 2 ವರ್ಷಗಳಲ್ಲಿ ಈ ಗಿಡಗಳು ಫಲ ನೀಡಲಾರಂಭಿಸಿವೆ. ಶಾಲೆಯ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

    2020-21ರಲ್ಲಿ ಗುಜರಾತ್​ನಿಂದ 90 ರೂಪಾಯಿಗೆ ಒಂದರಂತೆ ಪೇರಲ ಸಸಿ ಖರೀದಿಸಿ ತಂದು ಹನಿ ನೀರಾವರಿ ಪದ್ಧತಿ ಅಳವಡಿಸಿ ಅಡಕೆ ಗಿಡಗಳ ಮಧ್ಯೆ ನಾಟಿ ಮಾಡಿದ್ದರು. ಸಸಿಗಳು ಒಂದೇ ವರ್ಷದಲ್ಲಿ ಹೂ ಬಿಟ್ಟು ಫಸಲು ಬಿಡುವ ಸೂಚನೆ ನೀಡಿದವು. ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಕೊಟ್ಟಿಗೆ ಗೊಬ್ಬರ ಬಳಸಿದ್ದರಿಂದ ರೋಗಬಾಧೆ ಕಂಡುಬಂದಿಲ್ಲ.

    ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ವರ್ಷವಿಡೀ ಕಾಯಿಗಳನ್ನು ನೀಡುವ ಪೇರಲ ಗಿಡಗಳು ಚಳಿಗಾಲದಲ್ಲಿ ಮಾತ್ರ ಕಡಿಮೆ ಇಳುವರಿ ನೀಡುತ್ತವೆ. ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುವ ಪೇರಲ ಹಣ್ಣುಗಳು ರುಚಿಕರವಾಗಿವೆ ಎಂದು ಮುಲ್ಲಾ ಹರ್ಷ ವ್ಯಕ್ತಪಡಿಸುತ್ತಾರೆ.

    ವಾರ್ಷಿಕ 3-4 ಲಕ್ಷ ಆದಾಯ:

    3ರಿಂದ 4 ಹಣ್ಣು ಒಂದು ಕೆಜಿ ತೂಗುತ್ತವೆ. ವ್ಯಾಪಾರಿಗಳು ತೋಟಕ್ಕೆ ಬಂದು ಬಲಿತು ಮಾಗಿದ ಪೇರಲ ಹಣ್ಣುಗಳನ್ನು ಕೊಯ್ಲು ಮಾಡಿಕೊಂಡು ಹಣ ನೀಡುತ್ತಾರೆ. ಒಂದು ಎಕರೆಗೆ ವರ್ಷಕ್ಕೆ 3ರಿಂದ 4 ಲಕ್ಷ ರುಪಾಯಿ ಆದಾಯ ಬರುತ್ತಿದೆ. ಕೆಲವು ರೈತರು ಪೇರಲ ಗಿಡ ಬೆಳೆಯುವ ಆಸಕ್ತಿ ತೋರಿದ್ದು, ನಮ್ಮಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಮಧ್ಯಂತರ ಬೆಳೆಯಾಗಿ ಪೇರಲ ಲಾಭದಾಯಕ ಬೆಳೆಯಾಗಿದೆ. ಕಾಲಕಾಲಕ್ಕೆ ಗಿಡಗಳನ್ನು ಕಟಾವು ಮಾಡಿದರೆ ಅಡಕೆಗೆ ಯಾವುದೇ ತೊಂದರೆಯಾಗದು ಎಂಬುದು ಅಬ್ದುಲ್​ಖಾದರಖಾನ ಅವರ ಅಭಿಪ್ರಾಯ.

    ವಿಶೇಷ ತಳಿಗಳ ಪ್ರಾತ್ಯಕ್ಷಿಕೆ:

    ಅಬ್ದುಲ್​ಖಾದರಖಾನ್ ತಮ್ಮ ತೋಟದಲ್ಲಿ ಪೇರಲ ಹಣ್ಣಿನ ತಳಿಗಳಾದ ಜಿ-ವಿಲಾಸ್, ತೈವಾನ್ ಪಿಂಕ್, ಲಕ್ನೋ 49, ಅಲಹಾಬಾದ್ ಸಪೇಡ್, ವಿ.ಎನ್.ಆರ್.ಬಿಹಿ ಸೇರಿದಂತೆ ಹಲವು ತಳಿಗಳನ್ನು ಬೆಳೆಸಿದ್ದಾರೆ. ರೈತರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ.

    ಕೃಷಿ-ತೋಟಗಾರಿಕೆಯಲ್ಲಿ ಒಂದೇ ಬೆಳೆಯನ್ನಾಧರಿಸಿ ಜೀವನ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಬೆಳೆ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕಡಿಮೆ ನೀರು, ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ರೋಗರಹಿತ ಪೇರಲ ಗಿಡಗಳು ರೈತರಿಗೆ ಲಾಭ ತಂದುಕೊಂಡುತ್ತವೆ.

    | ಅಬ್ದುಲ್​ಖಾದರಖಾನ್ ಮುಲ್ಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts