More

    ಮತದಾನದಲ್ಲಿ ಹಳ್ಳಿಗರೇ ಬೆಸ್ಟ್

    ಕಾರವಾರ: ಸರ್ಕಾರದ ಮೂಲ ಸೌಕರ್ಯ ತಲುಪದಿದ್ದರೂ ಮತದಾನ ಮಾಡುವಲ್ಲಿ ಗ್ರಾಮೀಣ ಭಾಗದ ಜನರೇ ಬೆಸ್ಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

    ವಿಧಾನಸಭೆ ಅಭ್ಯರ್ಥಿ ಆಯ್ಕೆಗೆ ಬುಧವಾರ ನಡೆದ ಮತದಾನದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಮತಗಟ್ಟೆಗಳಲ್ಲೇ ಮತದಾನದ ಪ್ರಮಾಣ ಅತೀ ಹೆಚ್ಚಿನ ಪ್ರಮಾಣದಲ್ಲಾಗಿದೆ. ಪಟ್ಟಣದ ಕೆಲವು ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಶೇ.50 ನ್ನೂ ದಾಟಿಲ್ಲ.
    ಬುಧವಾರ ಜಿಲ್ಲೆಯಲ್ಲಿ ಸರಾಸರಿ ಶೇ.77.92 ರಷ್ಟು ಮತದಾನವಾಗಿದೆ. ಹಿಂದಿನ ವಿಧಾನಸಭಾ ಚುನಾವಣೆಗಿಂತ ಕಡಿಮೆಯೇ ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಶೇ. 78.03 ರಷ್ಟು ಮತದಾನವಾಗಿತ್ತು. 2013 ರಲ್ಲಿ ಶೇ. 74.02 ಹಾಗೂ 2008 ರಲ್ಲಿ ಶೇ. 69.11 ರಷ್ಟು ಮತದಾನವಾಗಿತ್ತು.

    ಈ ಬಾರಿ ಶೇ.78.21 ರಷ್ಟು ಪುರುಷರು, ಶೇ. 77.62 ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಯಲ್ಲಾಪುರದಲ್ಲಿ ಅತಿ ಹೆಚ್ಚು ಎಂದರೆ ಶೇ. 81.71, ಹಳಿಯಾಳ-78.48, ಕಾರವಾರ-73.86, ಕುಮಟಾ-77.66, ಭಟ್ಕಳ-77.73, ಶಿರಸಿ-ಶೇ.78.85 ರಷ್ಟು ಮತದಾನವಾಗಿದೆ.

    ಎಲ್ಲೆಲ್ಲಿ ಹೆಚ್ಚು: ಹಳಿಯಾಳದ ತಟ್ಟಿಹಳ್ಳ ಸರ್ಕಾರಿ ಶಾಲೆ-ಶೇ.93, ಕಾರವಾರ ಶಹರದ ಸರ್ಕಾರಿ ಬಜಾರ್ ಶಾಲೆ -ಶೇ.97.23, ಕುಮಟಾದ ಮಸಗುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ -ಶೇ.93.42, ಭಟ್ಕಳ ಹಾಡಗೇರಿ ಸರ್ಕಾರಿ ಪ್ರೌಢಶಾಲೆ ಶೇ.-96.78, ಶಿರಸಿ ಹುತ್ತಗಾರ ಸಹಿಪ್ರಾ ಶಾಲೆಯಲ್ಲಿ -ಶೇ.93.01, ಯಲ್ಲಾಪುರ ಅಟ್ಟಂಗಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -ಶೇ. 93.14 ರಷ್ಟು ಮತದಾನವಾಗಿದೆ. ಇವು ಆಯಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನವಾದ ಮತಗಟ್ಟೆಗಳಾಗಿವೆ.

    ಎಲ್ಲೆಲ್ಲಿ ಕಡಿಮೆ: ಕಾರವಾರದ ಸೀಬರ್ಡ್‌ನೌಕಾನೆಲೆಯ ಕೇಂದ್ರೀಯ ವಿದ್ಯಾಲಯದಲ್ಲಿರುವ ಮತಗಟ್ಟೆಯಲ್ಲಿ ಅತಿ ಕಡಿಮೆ ಎಂದರೆ ಶೇ. 3.40 ರಷ್ಟು ಮಾತ್ರ ಮತದಾನವಾಗಿದೆ. ಇದು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಯಾಗಿದೆ. ಕ್ಷತ್ರವಾರು ಗಮನಿಸಿದರೆ ದಾಂಡೇಲಿಯ ಮಹಾತ್ಮ ಗಾಂಧಿ ಶತಾಬ್ಧಿ ವಿದ್ಯಾಲಯದದ ಒಂದು ಮತಗಟ್ಟೆ-ಶೇ. 42.55, ಕಾರವಾರದ ಮಲ್ಲಾಪುರ ಕುರ್ನಿಪೇಟೆ ಪ್ರಾಥಮಿಕ ಶಾಲೆಯ ಮತಗಟ್ಟೆ-ಶೇ.41.51, ಕುಮಟಾ ಸರ್ಕಾರಿ ಪ್ರಾಥಮಿಕ ಶಾಲೆ ಎಡ ಭಾಗದ ಮತಗಟ್ಟೆ-ಶೇ.57.59,ಭಟ್ಕಳ ಆನಂದಾಶ್ರಮ ಕಾನ್ವೆಂಟ್ ಸ್ಕೂಲ್ ಮತಗಟ್ಟೆ- ಶೇ.47.35, ಶಿರಸಿ ಶಾಸಕರ ಮಾದರಿ ಶಾಲೆ ಉತ್ತರ ಭಾಗದ ಮತಗಟ್ಟೆ-ಶೇ.56.84, ಯಲ್ಲಾಪುರದ ಕಾಳಮ್ಮನಗರ ಶಾಲೆಯಲ್ಲಿ -ಶೇ.57.63 ರಷ್ಟು ಮತದಾನವಾಗಿದೆ.

    ಮತ ಯಂತ್ರ ತಲುಪಲು ವಿಳಂಬ

    ಹಳಿಯಾಳದಿಂದ ಮತ ಯಂತ್ರ ತುಂಬಿಕೊಂಡು ಕುಮಟಾಕ್ಕೆ ಹೊರಟಿದ್ದ ಲಾರಿ ಹೂಳಿನಲ್ಲಿ ಸಿಲುಕಿತ್ತು. ನಂತರ ಜೆಸಿಬಿ ತರಿಸಿ ಲಾರಿಯನ್ನು ಎಳೆದು ಮತ ಯಂತ್ರವನ್ನು ಗುರುವಾರ ಬೆಳಗಿನ ಜಾವದ ಹೊತ್ತಿಗೆ ಕುಮಟಾದ ಎ.ವಿ.ಬಾಳಿಗಾ ಕಾಲೇಜ್‌ನ ಸ್ಟ್ರಾಂಗ್ ರೂಂ.ಗೆ ತಲುಪಿಸಲಾಗಿದೆ. ಸ್ಟ್ರಾಂಗ್ ರೂಂನ್ನು ಸೀಲ್ ಮಾಡಲಾಗಿದ್ದು, ಅಲ್ಲಿ, 2 ಕೆಎಸ್‌ಆರ್‌ಪಿ ಹಾಗೂ 2 ಸಿಆರ್‌ಪಿಎ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಕೌಂಟಿಂಗ್‌ಗೆ ತಯಾರಿ

    ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜ್‌ನಲ್ಲಿ ಮೇ.13 ರಂದು ಮತ ಎಣಿಕೆ ನಡೆಯಲಿದೆ. ಎಣಿಕೆ ಕಾರ್ಯದ ತಯಾರಿಗೆ ಒಂದೇ ದಿನ ಬಾಕಿ ಇರುವುದರಿಂದ ಜಿಲ್ಲಾಡಳಿತ ಬರದಿಂದ ಸಿದ್ಧತೆ ನಡೆಸಿದೆ.

    ಎಲ್ಲೆಡೆ ಬ್ಯಾರಿಕೇಡ್ ಅಳವಡಿಕೆ, ಟೇಬಲ್‌ಗಳನ್ನು ಜೋಡಿಸುವುದು. ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ ಅಳವಡಿಕೆ ಮುಂತಾದ ಕಾರ್ಯಗಳು ನಡೆಯುತ್ತಿವೆ.
    ಮತ ಎಣಿಕೆಗೆ 6 ಪ್ರತ್ಯೇಕ ಕೋಣೆಯನ್ನು ಸಿದ್ಧ ಮಾಡಲಾಗಿದ್ದು ಪ್ರತಿ ಕೋಣೆಯಲ್ಲಿ 12 ಟೇಬಲ್‌ಗಳನ್ನು ಜೋಡಿಸಲಾಗುತ್ತಿದೆ. ಹಳಿಯಾಳ ಮತ್ತು ಕುಮಟಾ ಕ್ಷೇತ್ರಗಳಲ್ಲಿ ತಲಾ 215 ಮತಗಟ್ಟೆಗಳಿದ್ದು 18 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ.

    ಕಾರವಾರ ಮತ್ತು ಶಿರಸಿ ಕ್ಷೇತ್ರಗಳಲ್ಲಿ ಕ್ರಮವಾಗಿ 262 ಮತ್ತು 264 ಮತಗಟ್ಟೆಗಳಿದ್ದು 22 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಭಟ್ಕಳ ಮತ್ತು ಯಲ್ಲಾಪುರ ಕ್ಷೇತ್ರಗಳಲ್ಲಿ ಕ್ರಮವಾಗಿ 248 ಮತ್ತು 231 ಮತಗಟ್ಟೆಗಳಿದ್ದು ಕ್ರಮವಾಗಿ 21 ಮತ್ತು 20 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಇದಲ್ಲದೆ ಅಂಚೆ ಮತ ಪತ್ರಗಳನ್ನು ಎಣಿಸಲು ಕ್ಷೇತ್ರವಾರು ಪ್ರತ್ಯೇಕ ಕೋಣೆಗಳನ್ನು ನಿಗದಿಪಡಿಸಲಾಗಿದೆ.

    ಕಾರವಾರ,ಕುಮಟಾ, ಭಟ್ಕಳ ಮತ್ತು ಶಿರಸಿ ಕ್ಷೇತ್ರಗಳಿಗೆ ತಲಾ 4 ಟೇಬಲ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಯಲ್ಲಾಪುರ ಕ್ಷೇತ್ರದ ಅಂಚೆ ಮತ ಪತ್ರಗಳನ್ನು 3 ಟೇಬಲ್ ಗಳಲ್ಲಿ ಹಾಗೂ ಹಳಿಯಾಳ ಕ್ಷೇತ್ರದ ಅಂಚೆ ಮತ ಪತ್ರಗಳನ್ನು 2 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುವುದು.
    ಪ್ರತಿ ಅಂಚೆ ಮತ ಪತ್ರ ಎಣಿಕೆ ಟೇಬಲ್ ಗೆ ಒಬ್ಬ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬ ಮೈಕ್ರೋ ಒಬ್ಸರ್ವರ್ ನೇಮಿಸಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್ ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು, ಒಬ್ಬರು ಇರುತ್ತಾರೆ.ಅಂದಾಜು 700 ಸಿಬ್ಬಂದಿಯನ್ನು ಎಣಿಕೆಗೆ ನೇಮಿಸಲಾಗಿದೆ.

    ಅಂಚೆ ಮತಗಳ ವಿವರ

    ಹಳಿಯಾಳ-795, ಕಾರವಾರ-2662, ಕುಮಟಾ-1896, ಭಟ್ಕಳ-1765 ,ಶಿರಸಿ-2284, ಯಲ್ಲಾಪುರ-1230, ಅಂಚೆ ಮತ ಪತ್ರಗಳು ಗುರುವಾರದವರೆಗೆ ಸಂಗ್ರಹವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts