ಬೆಂಗಳೂರು: ವಿಆರ್ಎಲ್ ಸಂಸ್ಥೆ ಹೆಸರಿನಲ್ಲಿ ಮೂವರ್ಸ್ ಆ್ಯಂಡ್ ಪ್ಯಾಕರ್ಸ್ ಎಂಬ ನಕಲಿ ವೆಬ್ಸೈಟ್ ತೆರೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹೈದರಾಬಾದ್ ಮೂಲದ ರಾಜುರಾಮ್ ಶಿರವಿ ಅಲಿಯಾಸ್ ದಘಾಲ್ ರಾಮ್ (35) ಮತ್ತು ಬೆಂಗಳೂರಿನ ಗೊರಗುಂಟೆ ಪಾಳ್ಯದ ದಿನೇಶ್ ಕುಮಾರ್ ಅಲಿಯಾಸ್ ಶಿವಪ್ರಸಾದ್ (23) ಎಂದು ಗುರುತಿಸಲಾಗಿದೆ.
ವಿಆರ್ಎಲ್ ಹೆಸರಿನಲ್ಲಿ ಮೂವರ್ಸ್ ಆ್ಯಂಡ್ ಪ್ಯಾಕರ್ಸ್ ಎಂಬ ನಕಲಿ ವೆಬ್ಸೈಟ್ ತೆರೆದು, ಮನೆಯ ಸಾಮಾಗ್ರಿ ಮತ್ತು ವಾಹನಗಳನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಮೇರೆಗೆ ಇನ್ಸ್ಪೆಕ್ಟರ್ ಸಂತೋಷ್ ರಾಮ್ ಅವರು ಸ್ಥಳಕ್ಕೆ ಪಿಎಸ್ಐ ಕಳುಹಿಸಿ, ಆರೋಪಿಯನ್ನು ಹಿಡಿದು, ವಿಚಾರಣೆ ಮಾಡಿ, ಮೊಬೈಲ್ ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಸ್ಥಳದಲ್ಲೇ ಆರೋಪಿ ದಿನೇಶ್ನನ್ನು ಪೊಲೀಸರು ಬಂಧಿಸಿದ್ದು, ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೈದರಾಬಾದ್ಗೆ ತೆರಳಿ ಆತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಆರೋಪಿಗಳು ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಸಂಸ್ಥೆಗಳ ನಕಲಿ ವೆಬ್ಸೈಟ್ ತೆರೆದು ಸಂಪರ್ಕ ಸಂಖ್ಯೆ ನೀಡುತ್ತಿದ್ದರು. ಈ ವೆಬ್ಸೈಟ್ಗಳಲ್ಲಿ ನೀಡಲಾದ ಮೊಬೈಲ್ಫೋನ್ ಸಂಖ್ಯೆಗೆ ಕರೆ ಮಾಡುವ ಗ್ರಾಹಕರ ಬಳಿ ಮೊದಲಿಗೆ ಕಡಿಮೆ ಮೊತ್ತಕ್ಕೆ ವಸ್ತುಗಳನ್ನು ಸಾಗಿಸಲು ಒಪ್ಪುತಿದ್ದರು. ಬಳಿಕ ಗ್ರಾಹಕರ ಮನೆಗೆ ತೆರಳಿ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತರುತ್ತಿದ್ದರು. ಮಾರನೇ ದಿನ ದುಬಾರಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ, ವಸ್ತು ವಾಪಸ್ ನೀಡುವುದಿಲ್ಲ ಎಂದು ಹೆದರಿಸ್ತುತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ನಗರದಲ್ಲಿ ಇದೇ ರೀತಿ ಹಲವರಿಂದ ದುಬಾರಿ ಹಣ ಸುಲಿದಿರುವ ಸಾಧ್ಯತೆ ಇದ್ದು, ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಆರ್ಎಲ್ ಕಂಪನಿ ಹೆಸರಿನಲ್ಲಿ ಕೊರಿಯರ್ ಪಡೆದು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ
ವಿಆರ್ಎಲ್ ಸಂಸ್ಥೆ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸುತ್ತಿದ್ದವರ ಬಂಧನ..
ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು