ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ನಿಂತಿದ್ದ ‘ಗಾಳಿಪಟ 2’ ಚಿತ್ರದ ಶೂಟಿಂಗ್ಗೆ ಇದೀಗ ಮತ್ತೆ ಸಿದ್ಧತೆ ನಡೆಯುತ್ತಿದೆ. ಈ ಹಿಂದೆಯೇ ಯೂರೋಪ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಲಾಕ್ಡೌನ್ನಿಂದಾಗಿ ಯೂರೋಪ್ಗೆ ಚಿತ್ರೀಕರಣಕ್ಕೆಂದು ಹೋಗುವುದಕ್ಕೆ ಸಾಧ್ಯವಾಗಲಿಲ್ಲ. ಈಗಲೂ ಅನುಮತಿ ಸಿಗುವುದು ಕಷ್ಟವಿರುವುದರಿಂದ, ಯೂರೋಪ್ ಬದಲು ಕಜಕಿಸ್ತಾನ್ನಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ. ಅದರಂತೆ ಇದೀಗ ಫೆಬ್ರವರಿ ತಿಂಗಳ ಕೊನೆಯಲ್ಲಿ ಚಿತ್ರತಂಡ ಕಜಕಿಸ್ತಾನ್ಕ್ಕೆ ತೆರಳಲಿದೆ.
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್, ದಿಗಂತ್, ‘ಲೂಸಿಯಾ’ ಪವನ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲಾರ್ಧದ ಶೂಟಿಂಗ್ ಮುಗಿಸಿಕೊಂಡಿರುವ ನಿರ್ದೇಶಕರು, ಇದೀಗ ಕಜಕಿಸ್ತಾನದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಆ ಕಡೆಗೆ ಮುಖ ಮಾಡಿದ್ದಾರೆ. ಇನ್ನು, ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡ ಒಂದಷ್ಟು ಭಾಗದ ಚಿತ್ರೀಕರಣೋತ್ತರ ಕೆಲಸಗಳೂ ಶುರುವಾಗಿದ್ದು, ಕೆಲ ಕಲಾವಿದರು ತಮ್ಮ ಪಾಲಿನ ಡಬ್ಬಿಂಗ್ ಸಹ ಮುಗಿಸಿದ್ದಾರೆ. ಈ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ.