More

    ಸಿರಿಧಾನ್ಯದಲ್ಲಿ ಅರಳಿದ ಶ್ರೀರಾಮ ಮಂದಿರ; ಹಾವೇರಿಯ ಕಲಾವಿದ ಗಣೇಶ ರಾಯ್ಕರ ಕೈಚಳಕ

    ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಶುಭ ಸಂದರ್ಭದ ಹಿನ್ನೆಲೆಯಲ್ಲಿ ಹಾವೇರಿಯ ರಾಮಭಕ್ತ, ಯುವ ಕಲಾವಿದ ಗಣೇಶ ರಾಯ್ಕರ ಯಾವುದೇ ಬಣ್ಣ ಬಳಸದೆ, ಮೂರು ತರಹದ ಸಿರಿಧಾನ್ಯಗಳನ್ನು ಬಳಸಿ ರಾಮಮಂದಿರದ ಚಿತ್ರವನ್ನು ಬಿಡಿಸಿದ್ದಾರೆ.
    ನಗರದ ಅಕ್ಕಸಾಲಿಗ ಕುಟುಂಬದ ವೆಂಕಟೇಶ-ಮಾಲಾ ದಂಪತಿಯ ಪುತ್ರ ಚಿನ್ನ ಬೆಳ್ಳಿ ಕೆಲಸಗಾರ, ಸಿರಿಧಾನ್ಯ ಗಣೇಶ ಎಂದೇ ಖ್ಯಾತಿ ಪಡೆದಿರುವ ಗಣೇಶ ಶ್ರದ್ಧೆಯಿಂದ ರಾಮಮಂದಿರ ಚಿತ್ರ ಬಿಡಿಸಿದ್ದಾರೆ.
    ರಾಮಮಂದಿರ ಚಿತ್ರಕ್ಕಾಗಿ 3,977 ರಾಗಿ ಕಾಳುಗಳು, 410 ನವಣೆ, 306 ಹಾರಕ, 40 ಅಕ್ಕಿ ಕಾಳುಗಳು, 3 ಗ್ರಾಂ ಬೆಳ್ಳಿಯ ಬಾಣ, ಪ್ರಮುಖ 5 ಗೋಪುರಗಳಿಗೆ 70 ಮಿಮೀ ಬಂಗಾರದ ಕಳಶವನ್ನು ಇಟ್ಟು ರಚಿಸಿದ್ದಾರೆ. ಈ ಚಿತ್ರದಲ್ಲಿ ಮೊದಲಿಗೆ ಕನ್ನಡದಲ್ಲಿ ಜೈ ಶ್ರೀರಾಮ್ ಎಂದು ರಚಿಸಲಾಗಿದ್ದು, ನಂತರ ಮಂದಿರದ ಗೋಪುರದ ಮೇಲೆ ಉಲ್ಲನ್‌ನಿಂದ ಭಗವಾ ಧ್ವಜ, ಮಂದಿರದ ಕೆಳಗೆ ಬೆಳ್ಳಿಯ ಬಾಣವಿದೆ. ಅದರ ಕೆಳಗೆ ಹಿಂದಿ ಭಾಷೆಯಲ್ಲಿ ಜೈ ಶ್ರೀರಾಮ್ ಎಂದು ಬರೆದಿದ್ದಾರೆ.
    ಅಯೋಧ್ಯೆ ಅಕ್ಷತೆ ಬಳಕೆ
    ರಾಮಮಂದಿರ ಚಿತ್ರದಲ್ಲಿ ಅಯೋಧ್ಯೆಯಿಂದ ಬಂದಿದ್ದ ಅಕ್ಷತೆ ಕಾಳುಗಳನ್ನು ಬಳಸಿದ್ದಾರೆ. 15 ದಿನ ಇದಕ್ಕಾಗಿ ಮೀಸಲಿಟ್ಟು, ಚಿತ್ರ ರಚಿಸುವ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಬಾರಿ ‘ಜೈ ಶ್ರೀರಾಮ್’ ಎಂದು ಜಪಿಸಿದ್ದೇನೆ ಎನ್ನುತ್ತಾರೆ ಗಣೇಶ ರಾಯ್ಕರ.
    ಬಹುಮುಖ ಪ್ರತಿಭೆ
    ಗಣೇಶ ಓರ್ವ ಬಹುಮುಖ ಪ್ರತಿಭೆ. ಸಿರಿಧಾನ್ಯ ಚಿತ್ರಕಲೆ, ಕ್ರೀಡೆ, ಸಮಾಜ ಸೇವೆ, ಬಂಗಾರದಲ್ಲಿ 20 ಮಿಲಿ ಗ್ರಾಂ ರಾಷ್ಟ್ರಧ್ವಜ ಸ್ತಂಭ ನಿರ್ಮಾಣ, ಗಣೇಶನ ಚಿತ್ರ, ಪ್ರಧಾನಮಂತ್ರಿ ಮೋದಿಜಿ ಅವರ ಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಲೋಗೋ, ಹಾವೇರಿ ಹುಕ್ಕೇರಿ ಮಠದ ಶಿವಲಿಂಗ ಶ್ರೀಗಳ ಚಿತ್ರ, ಶ್ರೀ ಸದಾಶಿವ ಸ್ವಾಮೀಜಿ ಚಿತ್ರ, ಸ್ವಾಮಿ ವಿವೇಕಾನಂದರ ಚಿತ್ರ ರಚಿಸಿದ್ದಾರೆ. 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ದೇವಿ ಚಿತ್ರ ರಚಿಸಿ ಗಮನ ಸೆಳೆದಿದ್ದರು. ಈ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
    ಕೋಟ್:
    ಸಾಸಿವೆಗಿಂತಲೂ ಚಿಕ್ಕದಾದ ವಸ್ತುಗಳನ್ನು ಬಳಸಿ ಚಿತ್ರ ಬಿಡಿಸುವುದರಿಂದ ಸಹಜವಾಗಿ ಕಣ್ಣಿಗೆ ಆಯಾಸವಾಗುತ್ತದೆ. ಆದರೆ, ಜಗತ್ತಿಗೆ ಏನಾದರೂ ನನ್ನದೇ ಆದ ವಿಶೇಷ ಕಲೆಯನ್ನು ತೋರಿಸುವ ಹಂಬಲ ಮತ್ತು ರಾಮನ ಆಶೀರ್ವಾದ ಅದೆಲ್ಲವನ್ನೂ ಮರೆಸಿಬಿಡುತ್ತದೆ. ಜತೆಗೆ ಸಿರಿಧಾನ್ಯದ ಮಹತ್ವವನ್ನು ಸಾರುವ ಸದುದ್ದೇಶ ಇದರಲ್ಲಿದೆ.
    – ಗಣೇಶ ರಾಯ್ಕರ, ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts