More

    98 ಜನರಿಗೆ ಹೋಂ ಕ್ವಾರಂಟೈನ್

    ಗೋಕಾಕ: ಕಲ್ಲೋಳಿ ಹಾಗೂ ಶಿಲ್ತಿಬಾವಿ ಗ್ರಾಮದಲ್ಲಿ ತಲಾ ಒಂದೊಂದು ಕರೊನಾ ವೈರಸ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಭೇಟಿ ನೀಡಿ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದರು.

    ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮುಂಬೈ ಹಾಗೂ ದೆಹಲಿಯಿಂದ ಮರಳಿದ ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಲ್ಲೋಳಿ ಮತ್ತು ಶಿಲ್ತಿಬಾವಿ ಗ್ರಾಮದ ಕರೊನಾ ಸೋಂಕಿತರು ವಾಸವಿದ್ದ 50 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

    ಅವರ ಕುಟುಂಬ ಸದಸ್ಯರನ್ನು ಸಹ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆರೋಗ್ಯ, ಪೊಲೀಸ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕರೊನಾ ಸೋಂಕಿತರ ಸಂರ್ಪಕಕ್ಕೆ ಬಂದಿರುವ 98 ಜನರಿಗೆ ಈಗಾಗಲೇ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಮನೆ ಬಿಟ್ಟು ಹೊರಗಡೆ ಬರದಂತೆ ಸೂಚಿಸಲಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಮೆಳವಂಕಿ ಗ್ರಾಮಸ್ಥರು ಕಳೆದ ಬಾರಿ ನೆರೆ ಹಾವಳಿ ಸಂದರ್ಭದಲ್ಲಿ ನಮಗೆ ಘೋಷಿಸಲಾದ ಪರಿಹಾರ ದೊರಕಿಲ್ಲ. ಮತ್ತೆ ನೆರೆ ಹಾವಳಿ ಭೀತಿ ಎದುರಾಗಿದ್ದು, ಸೂಕ್ತ ಪರಿಹಾರ ಬೇಗ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕೋವಿಡ್-19 ವಾರ್ಡ್ ಸ್ಥಾಪಿಸಿ, ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವಂತೆ ಸೂಚಿಸಿದರು. ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts