More

    95 ವರದಿ ಬರಬೇಕಿದೆ

    ಗದಗ: ಜಿಲ್ಲೆಯಲ್ಲಿ ಕರೊನಾ ಪ್ರಕರಣ ಕುರಿತಂತೆ ಜಿಲ್ಲಾಡಳಿತ ಮಂಗಳವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಇದುವರೆಗೆ 451 ಜನರು ನಿಗಾಕ್ಕೆ ಒಳಗಾಗಿದ್ದಾರೆ. 132 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 303 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಒಟ್ಟು 298 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇದರಲ್ಲಿ 202 ವರದಿಗಳು ನೆಗೆಟಿವ್ ಬಂದಿದ್ದು, ಉಳಿದ 95 ಪ್ರಕರಣಗಳ ವೈದ್ಯಕೀಯ ವರದಿ ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ ಪಿ.ನಂ. 166 ರೋಗಿಗೆ ಕೋವಿಡ್-19 ದೃಢಪಟ್ಟಿದೆ. ಪಿ-166 ಪ್ರಕರಣದ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ ಒಟ್ಟಾರೆ 82 ಜನರನ್ನು ಗುರುತಿಸಲಾಗಿದ್ದು, ಎಲ್ಲ ಜನರ ಮಾದರಿಗಳು ನಕಾರಾತ್ಮಕವಾಗಿವೆ (ನೆಗೆಟಿವ್) ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    250 ಲೀಟರ್ ಸ್ಯಾನಿಟೈಸರ್, ಹಣ್ಣು ವಿತರಣೆ

    ಮುಂಡರಗಿ: ಗಂಗಾಪುರ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರು ತಾಲೂಕಿನ ಕಲಕೇರಿ, ಬಾಗೇವಾಡಿ, ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಕೊರ್ಲಹಳ್ಳಿ ಚೆಕ್​ಪೋಸ್ಟ್​ನ ಸಿಬ್ಬಂದಿಗೆ, ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ ಹಾಗೂ ಅಂಗನವಾಡಿ ಸಿಬ್ಬಂದಿಗೆ 250 ಲೀಟರ್ ಸ್ಯಾನಿಟೈಸರ್, ಹಣ್ಣುಗಳನ್ನು ಮಂಗಳವಾರ ವಿತರಿಸಿದರು.

    ಶಿವಕುಮಾರಗೌಡ ಪಾಟೀಲ ಮಾತನಾಡಿ, ಎಲ್ಲ ಸಿಬ್ಬಂದಿ ತಮ್ಮ ಜೀವನವನ್ನು ಬೇರೆಯವರ ಸೇವೆಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಇವರ ಕಾರ್ಯವನ್ನು ಅಭಿನಂದಿಸಬೇಕು. ಸರ್ಕಾರದ ನಿರ್ಣಯವನ್ನು ಪಾಲಿಸಿ ಸಹಕಾರ ನೀಡಬೇಕು ಎಂದರು.

    ಡಾ. ಸಂತೋಷಗೌಡ ಪಾಟೀಲ, ಡಾ. ಎಸ್.ಎಂ. ಭಾವಿಮನಿ, ಡಾ. ಕಿರಣ ಬೂದಿಹಾಳ, ಡಾ. ಮುಕುಂದ ಈಟಿ, ಡಾ. ಜೆ.ಎಫ್. ಹಾರೋಗೇರಿ, ಶಿದ್ದನಗೌಡ ಪಾಟೀಲ, ಕಾರಿಶಿದಪ್ಪ ಚಿಕ್ಕವಡ್ಡಟ್ಟಿ, ನಿಂಗಪ್ಪ ಬನ್ನಿಕೊಪ್ಪ, ಜಾಹೀರುದ್ಧೀನ ಮುಲ್ಲಾ, ಬಾಬುಜಾನ ಅಳವಂಡಿ, ಇತರರಿದ್ದರು.

    ಜನ ಜಾಗೃತಿ ಜಾಥಾ

    ಮುಳಗುಂದ: ಸ್ಥಳೀಯ ಪಪಂ ಪೌರ ಕಾರ್ವಿುಕರು ಕರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮುಂಜಾಗ್ರತೆ ಕ್ರಮವಾಗಿ ಜನ ಜಾಗೃತಿ ಜಾಥಾ ನಡೆಸಿದರು.

    ಪಪಂ ಕಾರ್ಯಾಲಯದಿಂದ ಆರಂಭವಾದ ಜಾಥಾ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವದು, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಮೊದಲಾದ ಘೊಷಣೆಗಳನ್ನು ಕೂಗಿದರು.

    ಜನ ಮನೆ ಬಿಟ್ಟು ಹೊರಗಡೆ ಬಾರದಂತೆ ಹಾಗೂ ಬೀದಿಯಲ್ಲಿ ಅನವಶ್ಯಕ ಸಂಚರಿಸದಂತೆ, ಧಾರ್ವಿುಕ ಕಾರ್ಯಕ್ರಮದಲ್ಲಿ ಗುಂಪು ಗುಂಪಾಗಿ ಸೇರದಂತೆ, ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

    ಗುಡಿಸಲುವಾಸಿಗಳಿಗೆ ದಿನಸಿ, ತರಕಾರಿ ವಿತರಣೆ

    ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜಿಪಂ ಸದಸ್ಯ ಎಸ್.ಪಿ. ಬಳಿಗಾರ ಬಡ, ಕೂಲಿಕಾರ, ಗುಡಿಸಲುವಾಸಿಗಳಿಗೆ ದಿನಸಿ, ತರಕಾರಿ ವಿತರಿಸಿದರು.

    ಎಲ್ಲರೂ ಮನೆಯಲ್ಲಿ ಇರುವುದರಿಂದ ಮಾತ್ರ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು. ಜನರ ಆರೋಗ್ಯ ಕಾಪಾಡುವ, ಜೀವನಾವಶ್ಯಕ ವಸ್ತುಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಎಸ್.ಪಿ. ಬಳಿಗಾರ ಹೇಳಿದರು.

    ನಂತರ ಅವರು ಗ್ರಾಪಂನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಬಳಿಕ ಗ್ರಾಪಂ ಕಾರ್ವಿುಕರಿಗೆ, ಸಿಬ್ಬಂದಿಗೆ ಸ್ಯಾನಿಟರಿಸ್ ವಿತರಿಸಿದರು. ಎಂ.ಎನ್. ಸುಣಗಾರ, ರಮೇಶ ರ್ಬಾ, ರಾಜರತ್ನ ಹುಲಗೂರ, ನಿಂಗಪ್ಪ ಓಲೇಕಾರ, ಯಲ್ಲಪ್ಪ ತಳವಾರ, ಭರತ ಬಳಿಗಾರ, ಬಸವರಾಜ ತೋಟದ, ಶಂಭು ಹುನಗುಂದ, ಇತರರಿದ್ದರು.

    ವಾರಪೂರ್ತಿ ದಿನಸಿ ವ್ಯಾಪಾರಕ್ಕೆ ಅವಕಾಶ

    ಲಕ್ಷ್ಮೇಶ್ವರ: ಕರೊನಾ ವೈರಸ್ ಹರಡದಂತೆ ತಡೆಯುವ ಜತೆಗೆ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಕಲ್ಪಿಸುವ ಉದ್ದೇಶದಿಂದ ವಾರವಿಡೀ ಬೆಳಗ್ಗೆ 6ರಿಂದ 9 ಗಂಟೆ ವರೆಗೆ ದಿನಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯುವ ಜವಾಬ್ದಾರಿಯೊಂದಿಗೆ ವಹಿವಾಟು ನಡೆಸಬೇಕು ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.

    ಇಲ್ಲಿನ ತಹಸೀಲ್ದಾರ ಕಾರ್ಯಾಲಯದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ಕರೊನಾ ವೈರಸ್​ನಿಂದ ಪಾರಾಗಲು ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಯುವುದು. ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು, ವ್ಯಾಪಾರಸ್ಥರು ಬರುತ್ತಾರೆ. ಈ ವೇಳೆ ವೈರಸ್ ತಡೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಇನ್ನು ಕಿರಾಣಿ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ದಿನಸಿ ಮಾರಾಟ ಮಾಡಬಾರದು. ತರಕಾರಿ ವ್ಯಾಪಾರಸ್ಥರು ಸೂಚನೆಯಂತೆ ಮನೆ ಮನೆಗೆ ಹೋಗಿ ಅಚ್ಚುಕಟ್ಟಾಗಿ ತರಕಾರಿ ಮಾರಬೇಕು. ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಮಾತನಾಡಿ, ವ್ಯಾಪಾರಸ್ಥರು, ರೈತರು ತಮ್ಮ ಸರಕು, ಕೃಷಿ ಉತ್ಪನ್ನ ಸಾಗಾಟಕ್ಕೆ ವ್ಯವಸ್ಥೆ ಮಾಡಬೇಕು. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಾಲೂಕಾಡಳಿತ ಕೈಗೊಂಡ ಎಲ್ಲ ಸೂಚನೆಗಳನ್ನು ಪಾಲಿಸಬೇಕು ಎಂದರು.

    ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಸೋಮಣ್ಣ ಮುಳಗುಂದ, ವಿಜಯ ಹತ್ತಿಕಾಳ, ಭರತಣ್ಣ ಬರಿಗಾಲಿ, ಮಾಲತೇಶ ಅಗಡಿ, ಎಸ್.ಎ. ಬಿಜಾಪುರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts