More

    ಶ್ರೀ ಬಸವೇಶ್ವರಸ್ವಾಮಿಯ 92 ನೇ ಜಾತ್ರಾ ಮಹೋತ್ಸವ

    ಹಿರೀಸಾವೆ: ನಿಸರ್ಗದ ಹಿಂದೆ ನಿಂತು ಜಗತ್ತನ್ನು ಮುನ್ನಡೆಸುವ ಅದ್ಭುತ ಶಕ್ತಿಯೊಂದಿದೆ ಎನ್ನುವುದು ಅಕ್ಷರಶಃ ಸತ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ಪುರಾಣ ಪ್ರಸಿದ್ದ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 92 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇವರ ಇಚ್ಛೆಗೆ ಅನುಸಾರವಾಗಿಯೇ ಇಲ್ಲಿ ಎಲ್ಲವೂ ನಡೆಯಲಿದೆ ಎಂದರು.

    ಅಶಿಸ್ತಿನ ಬದುಕನ್ನು ತೊರೆದು ನಿಸ್ವಾರ್ಥದೊಂದಿಗೆ ಸದ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ. ಒಬ್ಬರಿಗೊಬ್ಬರು ಸಹಾಯ ಮಾಡುವುದೇ ಮಾನವೀಯ ಧರ್ಮ. ಆದರೆ ನಾವು ಮಾಡುವ ದಾನ ಪಡೆದವರಿಗೆ ಸಾರ್ಥಕವಾಗಬೇಕೆ ಹೊರತು ಹೊರೆಯಾಗಬಾರದು. ಬದುಕು ಕಟ್ಟಿಕೊಳ್ಳಲು ದಾರಿಯಾಗಿರಬೇಕು ಎಂದರು.

    ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನಾವು ಎಷ್ಟೆಲ್ಲ ದುಡಿದಿದ್ದೇವೆ, ಏನೆಲ್ಲ ಸಂಪಾದಿಸಿದ್ದೇವೆ ಎಂದು ಎಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ವಿನಿಯೋಗಿಸಿದ್ದೇವೆ ಎಂಬುದನ್ನು ಅರಿಯಬೇಕು. ಕುಡಿಕೆ ತುಂಬುವಷ್ಟು ಕೂಡಿಟ್ಟು ಸ್ವಾರ್ಥ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಒಳಿತು ಎಂದರು.

    ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಬಸವೇಶ್ವರಸ್ವಾಮಿಯ ದೇಗುಲ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಾಗಿದ್ದು ಈಗಾಗಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಗರ್ಭಗುಡಿ ನಿರ್ಮಾಣಕ್ಕೆ 10 ಲಕ್ಷ ರೂ. ಸಮರ್ಪಿಸುತ್ತೇನೆ ಎಂದು ತಿಳಿಸಿದರು.

    ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 2023 ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ 4 ಸರ್ಕಾರಿ ಫ್ರೌಢಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

    ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪುಷ್ವವೃಷ್ಟಿ ನೆರವೇರಿಸಿ ಗುರುವಂದನೆ ಸಲ್ಲಿಸಲಾಯಿತು. ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಸದಸ್ಯೆ ಸುಮಾ, ದಿಡಗ ಗ್ರಾಪಂ ಅಧ್ಯಕ್ಷ ಎನ್.ಆರ್.ರತ್ನರಾಜ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಗುಡಿಗೌಡ ಪ್ರಕಾಶ್, ಗಣೇಶ್‌ಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts