More

    ಕಳವು ಪ್ರಕರಣದಡಿ 8 ಜನರ ಬಂಧನ

    ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ಸೇತುವೆ ಬಳಿ ಕಾಮಗಾರಿಗಾಗಿ ಶೇಖರಿಸಿಟ್ಟಿದ್ದ ಕಬ್ಬಿಣದ ಪ್ಲೇಟ್ ಹಾಗೂ ಸೆಂಟ್ರಿಂಗ್ ಪ್ಲೇಟ್‌ಗಳನ್ನು 14 ಜನ ತಂಡ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಭರತ್, ಮೋಹನ್ ಕುಮಾರ್, ಉದಯಕುಮಾರ್, ಅಪೂರ್ವ, ಸಮೀ, ಅಕ್ಷಯ್, ಹರ್ಷ, ಹನೀಫ್ ಬಂಧಿತ ಆರೋಪಿಗಳು. ಮದ್ದೂರು ತಾಲೂಕು ಸಮೀಪದ ಸುತ್ತಮುತ್ತಲ ಗ್ರಾಮಗಳಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಇನ್ನು 6 ಜನರ ಪತ್ತೆಗೂ ಕ್ರಮ ಕೈಗೊಂಡಿದ್ದಾರೆ.

    ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪದ ಸೇತುವೆ ಬಳಿ ಕಾಮಗಾರಿಗಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಸ್ಟೀಲ್ ಪ್ಲೇಟ್ ಹಾಗೂ ಸೆಂಟ್ರಿಂಗ್ ಪ್ಲೇಟ್‌ಗಳನ್ನು ಇರಿಸಲಾಗಿತ್ತು. 14 ಜನರ ತಂಡವೊಂದು ಒಂದೂವರೆ ಟನ್ ತೂಕದ 17 ಸ್ಟೀಲ್ ಪ್ಲೇಟ್ ಹಾಗೂ 32 ಸೆಂಟ್ರಿಂಗ್ ಪ್ಲೇಟ್ ಕದ್ದೊಯ್ದಿತ್ತು. ಕಳವು ಮಾಡುವ ವೇಳೆ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಕಟ್ಟಿ ಹಾಕಿ ಹೆದರಿಸಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಕಳ್ಳತನಕ್ಕೆ ಸಂಬಂಧಿಸಿದ 14 ಜನ ಆರೋಪಿಗಳ ಪೈಕಿ 8 ಜನರನ್ನು ಬಂಧಿಸಿದ್ದಾರೆ. ಕಳುವಾಗಿದ್ದ 17 ಸ್ಟೀಲ್ ಪ್ಲೇಟ್ ಹಾಗೂ 32 ಸೆಂಟ್ರಿಂಗ್ ಪ್ಲೇಟ್‌ಗಳು, ಕೃತ್ಯಕ್ಕೆ ಬಳಸಿದ್ದ ಬೈಕ್, ಪಿಕ್‌ಅಪ್ ವಾಹನವನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಸಿಪಿಐ ಶಿವಮಾದಯ್ಯ, ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಗಣೇಶ್, ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಎಎಸ್‌ಐ ತಖೀವುಲ್ಲಾ, ಹೆಡ್ ಕಾನ್‌ಸ್ಟೆಬಲ್ ವೆಂಕಟೇಶ್, ಕಿಶೋರ್, ಕಾನ್‌ಸ್ಟೆಬಲ್‌ಗಳಾದ ಬಿಳಿಗೌಡ, ಶಿವಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವೀರೇಂದ್ರ, ಅನಿಲ್ ಕುಮಾರ್ ಇನ್ನಿತರರು ಇದ್ದರು.

    ಕಳ್ಳರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧೀನ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಪ್ರಶಂಸೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts