More

    78 ಜನರಿಗೆ ಕರೊನಾ ಸೋಂಕು ಖಚಿತ

    ಕಾರವಾರ: ಜಿಲ್ಲೆಯ ಮತ್ತೆ 78 ಜನರಿಗೆ ಕರೊನಾ ಸೋಂಕು ಇರುವುದು ಸೋಮವಾರ ಖಚಿತವಾಗಿದೆ. ಅಂಕೋಲಾದಲ್ಲಿ 16, ಭಟ್ಕಳದಲ್ಲಿ 13, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 39, ಕಾರವಾರದಲ್ಲಿ 1, ಕುಮಟಾದಲ್ಲಿ 8, ಮುಂಡಗೋಡಿನಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.

    ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ 64 ಜನರಿಗೆ, ಹಳಿಯಾಳಕ್ಕೆ ವಿದೇಶದಿಂದ ಬಂದ ಒಬ್ಬ ವ್ಯಕ್ತಿಗೆ, ಹೊರ ಊರುಗಳಿಂದ ಬಂದ ಇಬ್ಬರಲ್ಲಿ, ಜ್ವರದ ಲಕ್ಷಣ ಇದ್ದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು 10 ಜನರ ರೋಗದ ಮೂಲ ಪತ್ತೆಯಾಗಿಲ್ಲ.

    ಪಿಡಿಒಗೂ ಸೋಂಕು: ಹಾರವಾಡದಲ್ಲಿ ಕರೊನಾ ವಿರುದ್ಧ ಹೋರಾಡುತ್ತಿದ್ದ ಪಿಡಿಒ ಅವರಿಗೂ ಸೋಂಕು ತಗುಲಿದೆ. ಅಂಕೋಲಾ ಪಟ್ಟಣದ ಮುಲ್ಲಾವಾಡಾದಲ್ಲಿ 7 ಜನರಲ್ಲಿ, ಮೂಲಿಕೇಣಿಯಲ್ಲಿ 6, ಕಣಗಿಲ್, ಮೊಗಟಾ, ಕಂತ್ರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕುಮಟಾ ಗೋಕರ್ಣದ ಬೇಲೆ ಹಿತ್ತಲಿನ ಒಂದೇ ಕುಟುಂಬದ ನಾಲ್ವರಲ್ಲಿ ಕರೊನಾ ಪಾಸಿಟಿವ್ ಬಂದಿದೆ.

    ಪಡಿತರ ಅಂಗಡಿ ಬಂದ್: ಕಾರವಾರ ತಾಲೂಕಿನ ಕೋಣೆವಾಡದಿಂದ ಕೆಲವು ಅಂಗಡಿಗಳಿಗೆ ಪಡಿತರ ವಿತರಣೆ ಮಾಡುವ ವಾಹನ ಚಾಲಕನಿಗೆ ಸೋಂಕು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಪಡಿತರ ಅಂಗಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ಹಳಿಯಾಳ ಪಟ್ಟಣದ ಕೆಎಚ್​ಬಿ ಕಾಲನಿಯ ನಿವಾಸಿ, ಯಡೋಗಾದ ಸರ್ಕಾರಿ ಆಸ್ಪತ್ರೆಯ ಫಾರ್ವಸಿಸ್ಟ್ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಮಂಗಳವಾಡ ಗ್ರಾಮದಲ್ಲಿ ಸೋಂಕಿತರ ಕುಟುಂಬದ ಐವರಿಗೂ ಕರೊನಾ ಪಾಸಿಟಿವ್ ಬಂದಿದೆ. ಬಸವಳ್ಳಿಯ ಪುರುಷ, ತೇರಗಾಂವ ಹಾಗೂ ತತ್ವಣಗಿ ಗ್ರಾಮದ ಮಹಿಳೆಯರಿಗೂ ಕರೊನಾ ಬಂದಿದೆ.

    ಭಟ್ಕಳ ತಹಸೀಲ್ದಾರ್ ಕಚೇರಿಯ ನೌಕರನೊಬ್ಬನಿಗೆ ಸೋಂಕು ಕಂಡುಬಂದಿದ್ದು, ಕಚೇರಿಯನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಯಿತು. ಇನ್ನು, ತಾಲೂಕಿನಲ್ಲಿ ಸೋಮವಾರ 13 ಪ್ರಕರಣಗಳು ಕಂಡುಬಂದಿದ್ದು, ಹೆಚ್ಚಿನವರು ಸೋಂಕಿತರ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ.

    ಕೋವಿಡ್ ಜತೆಯಲ್ಲಿ ಕಾಮಾಲೆ ಕಾಟ, ದಾಂಡೇಲಿ ಪರಿಸ್ಥಿತಿ ಗಂಭೀರ
    ದಾಂಡೇಲಿ ನಗರದಲ್ಲಿ ಕರೊನಾದ ಭಯದಲ್ಲಿ ಇತರ ಸಾಮಾನ್ಯ ರೋಗಗಳಿಗೂ ಚಿಕಿತ್ಸೆ ಸಿಗದಂತಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಬೆಳೆಯುತ್ತಲೇ ಇವೆ. ಸೋಂಕು ತಡೆಯಲು ಪಣತೊಟ್ಟು ನಿಂತ ಖಾಸಗಿ ವೈದ್ಯರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೂ ಕಾಣಿಸಿಕೊಂಡಿದೆ. ಇಎಸ್​ಐ ಆಸ್ಪತ್ರೆ ಸೀಲ್​ಡೌನ್ ಮಾಡಲಾಗಿದೆ. ಇದು ಜಿಲ್ಲೆಯ ಕೈಗಾರಿಕಾ ನಗರಿಯ ಜನರ ಎದೆ ನಡುಗಿಸಿದೆ. ಇದರಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್​ಗಳು ಬಂದ್ ಆಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಹೊರತುಪಡಿಸಿ ಇತರ ರೋಗಿಗಳಿಗೆ ಲಘು ಚಿಕಿತ್ಸೆ ನೀಡಿ ಕಳುಹಿಸಲಾಗುತ್ತಿದೆ. ಕರೊನಾ ಬಿಟ್ಟು ಇತರ ಕೆಲವು ರೋಗಗಳಿಗೆ ತುತ್ತಾದವರು ಆತಂಕ ಪಡುವ ಪರಿಸ್ಥಿತಿ ನಿರ್ವಣವಾಗಿದೆ. ಚಿಕಿತ್ಸೆಗಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ಬಂದಿದೆ. ಸೋಮವಾರ ದಾಂಡೇಲಿ ವೆಸ್ಟ್ ಕೋಸ್ಟ್ ಕ್ವಾರ್ಟರ್ಸ್​ನಲ್ಲಿ ಡಿಆರ್​ಟಿ ಮತ್ತು ಸ್ಟಾಫ್ ಕ್ವಾರ್ಟರ್ಸ್​ನಲ್ಲಿ ಒಟ್ಟು 5, ಗಣೇಶ ನಗರದಲ್ಲಿ 6, ಕೆಸಿ ಸರ್ಕಲ್ ಭಾಗದಲ್ಲಿ 4, ವಿನಾಯಕ ನಗರದಲ್ಲಿ 2, ಗೇಟ್-1 ಸಮೀಪ 3 ಜನರಿಗೆ ಸೋಂಕು ಖಚಿತವಾಗಿದೆ.

    48 ಜನರ ಬಿಡುಗಡೆ: ಕರೊನಾದಿಂದ ಗುಣ ಹೊಂದಿದ 48 ಜನರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಯಿತು. ಶಿರಸಿ ಮತ್ತು ಹೊನ್ನಾವರದಲ್ಲಿ ತಲಾ ಒಬ್ಬರು, ಕಾರವಾರದ ಐದು, ಕುಮಟಾದ 19, ಯಲ್ಲಾಪುರದ ಎಂಟು, ಮುಂಡಗೋಡಿನ 14 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts