More

    7500 ಮೀನುಗಾರರಿಗೆ ಪರಿಹಾರ ಕೈತಪ್ಪುವ ಭೀತಿ

    ಕಾರವಾರ: ಸಿಎಂ ಘೊಷಿಸಿದ ಲಾಕ್​ಡೌನ್ ಪ್ಯಾಕೇಜ್​ನಲ್ಲಿ ಒಂದು ಶಬ್ದ ಬದಲಾಗಿದ್ದು, ಕರಾವಳಿ ಮೀನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಘೊಷಿಸಿದ ಎರಡನೇ ಹಂತದ ಲಾಕ್​ಡೌನ್ ಪರಿಹಾರ ಪ್ಯಾಕೇಜ್​ನಲ್ಲಿ ಮೀನುಗಾರರನ್ನು ಪರಿಗಣಿಸಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ರೂಪಾಲಿ ನಾಯ್ಕ, ಸುನೀಲ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಮೀನುಗಾರರ ಮುಖಂಡರು ಪ್ಯಾಕೇಜ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕರಾವಳಿ ಮೀನುಗಾರರ ಬದಲು ಒಳನಾಡು ಮೀನುಗಾರರಿಗೆ ಸಿಎಂ ಪರಿಹಾರ ನೀಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಆದೇಶದಲ್ಲೇನಿದೆ..?: ಭಾರತ ಸರ್ಕಾರದ ಮೀನುಗಾರರ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ ರಾಜ್ಯದ 18,746 ಮೀನುಗಾರರಿಗೆ ಹಾಗೂ ರಾಜ್ಯದ 7668 ಇನ್​ಲ್ಯಾಂಡ್ ಮೀನುಗಾರಿಕೆ ನಡೆಸುವ ದೋಣಿ ಮಾಲೀಕರಿಗೆ ತಲಾ 3 ಸಾವಿರ ರೂ. ನೀಡಲಾಗುವುದು. ಇದಕ್ಕೆ ಒಟ್ಟಾರೆ 7.9 ಕೋಟಿ ಖರ್ಚಾಗುವುದು ಎಂದು ಸಿಎಂ ಘೊಷಿಸಿರುವ ಪತ್ರಿಕಾ ಹೇಳಿಕೆಯಲ್ಲಿದೆ.

    ಗೊಂದಲವೇನು..?: ‘ಸಮುದ್ರದಲ್ಲಿ ಇಂಜಿನ್ ಇಲ್ಲದೇ ಹುಟ್ಟು ಹಾಕಿಕೊಂಡು ಅಥವಾ ಸಣ್ಣ ಇಂಜಿನ್ ಅಳವಡಿಸಿ ಮೀನುಗಾರಿಕೆ ನಡೆಸುವ ದೋಣಿಗಳಿಗೆ ಪರಿಹಾರದ ಪ್ಯಾಕೇಜ್ ಘೋಷಣೆಯಾಗಿದೆ. ಅದು ‘ಇಂಡಿಜೀನಿಯಸ್’(ನಾಡದೋಣಿ) ಎಂದಾಗಬೇಕಿತ್ತು. ಶಬ್ದ ಬದಲಾಗಿ ‘ಇನ್​ಲ್ಯಾಂಡ್’(ಒಳನಾಡು) ಎಂದು ಬದಲಾಗಿದೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಜತೆ ರ್ಚಚಿಸಿದ್ದು, ಪರಿಷ್ಕೃತ ಆದೇಶವನ್ನು ಶೀಘ್ರ ಹೊರಡಿಸುವುದಾಗಿ ತಿಳಿಸಿದ್ದಾರೆ’ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜು ಸ್ಪಷ್ಟಪಡಿಸಿದ್ದಾರೆ.

    ಪರಿಷ್ಕೃತ ಆದೇಶ ಹೊರಡಿಸಿದರೆ ನಾಡದೋಣಿ ಮೀನುಗಾರರಿಗೆ ಸೌಲಭ್ಯ ದೊರೆಯಲಿದೆ. ಇಲ್ಲದೇ ಹೋದಲ್ಲಿ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದ ನದಿಗಳಲ್ಲಿ, ದೊಡ್ಡ ಕೆರೆಗಳಲ್ಲಿ ಮೀನುಗಾರಿಕೆ ಮಾಡುವ ಒಳನಾಡು ಮೀನುಗಾರರಿಗೆ ಈ ಸೌಲಭ್ಯ ದೊರೆಯಲಿದೆ.

    ಜಿಲ್ಲೆಯಲ್ಲಿ ಎಷ್ಟು ..?: ಆಗಿರುವ ಶಬ್ದ ಪ್ರಮಾದ ಸರಿಪಡಿಸಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದರೆ, ಜಿಲ್ಲೆಯ ಸುಮಾರು 7 ಸಾವಿರ ನಾಡದೋಣಿ ಮೀನುಗಾರರು ಮತ್ತು ಉಳಿತಾಯ ಪರಿಹಾರ ಯೋಜನೆಯಡಿ ಹೆಸರು ನೋಂದಾಯಿಸಿದ ಜಿಲ್ಲೆಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳ 7500 ಸದಸ್ಯರು ಸೇರಿ 14,500 ಜನರಿಗೆ ಪ್ಯಾಕೇಜ್ ಸಿಗಲಿದೆ. ಇಲ್ಲದಿದ್ದರೆ, ಹೆಸರು ನೋಂದಾಯಿಸಿದ 7500 ಸದಸ್ಯರಿಗೆ ಮಾತ್ರ ಸಿಗಲಿದೆ.

    ಮತ್ಸ್ಯಾಮ, ಚಂಡ ಮಾರುತ ಹಾಗೂ ಲಾಕ್​ಡೌನ್​ನಿಂದ ಮೀನುಗಾರರು ಸಂಕಷ್ಟಕ್ಕೆ ಈಡಾಗಿದ್ದು, ಅವರಿಗೆ ಲಾಕ್​ಡೌನ್ ಪರಿಹಾರ ಘೊಷಿಸಬೇಕು ಎಂದು ಸಿಎಂ ಬಿಎಸ್​ಯುಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಅದರಂತೆ ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದು, ನನ್ನ ಕ್ಷೇತ್ರದ ಹಲವು ಮೀನುಗಾರರಿಗೂ ಇದರಿಂದ ಪ್ರಯೋಜನವಾಗಲಿದೆ ಎಂಬುದು ಸಂತಸದ ಸಂಗತಿ.

    ರೂಪಾಲಿ ನಾಯ್ಕ, ಶಾಸಕಿ

    ರಾಜ್ಯದ ಕರಾವಳಿಯಲ್ಲಿ ಲಕ್ಷಾಂತರ ಮೀನುಗಾರರಿದ್ದಾರೆ. ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಆದರೆ, ಸಿಎಂ ಯಡಿಯೂರಪ್ಪ ಅವರು ಘೊಷಿಸಿರುವ ಪ್ಯಾಕೇಜ್ ಮೀನುಗಾರರ ಮೂಗಿಗೆ ತುಪ್ಪ ಸವರಿದಂತಿದೆ. ಕೇವಲ 26,414 ಮೀನುಗಾರರಿಗೆ ಪರಿಹಾರ ನೀಡಿದ್ದು, ಉಳಿದ ಮೀನುಗಾರರು ಏನು ಮಾಡಬೇಕು? ರೈತರಂತೆ ಮೀನುಗಾರರಿಗೆ ಸಾಲ ಮನ್ನಾ ಘೊಷಿಸಬೇಕು. ಹೆಚ್ಚಿನ ಪರಿಹಾರ ನೀಡಬೇಕು.

    ಉಮಾಕಾಂತ ಹರಿಕಂತ್ರ

    ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಮೀನುಗಾರರ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts