More

    73 ಕೇಂದ್ರಗಳಲ್ಲಿ ಪರೀಕ್ಷೆ

    ಕಾರವಾರ: ಕರೊನಾ ಭೀತಿಯಿಂದ ರಾಷ್ಟ್ರವೇ ಶಟ್​ಡೌನ್ ಆಗುತ್ತಿರುವ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

    ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪರೀಕ್ಷಾ ಕೇಂದ್ರವನ್ನು ಸಜ್ಜು ಮಾಡುವುದು ಅವರನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ವಾಹನ ವ್ಯವಸ್ಥೆ ಮಾಡುವುದು. ಪ್ರಶ್ನೆ ಪತ್ರಿಕೆ ಸಾಗಾಟ ಮುಂತಾದ ಕಾರ್ಯಗಳಿಗೆ ಅಧಿಕಾರಿಗಳು ಓಡಾಡಲೇಬೇಕಿದೆ. ಮಾ.27ರಿಂದ ಪರೀಕ್ಷೆ ನಡೆಯಲಿದ್ದು, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 38 ಹಾಗೂ ಶಿರಸಿ ಶೈಕ್ಷಣಿಕ ಜಲ್ಲೆಯಲ್ಲಿ 35ಸೇರಿ ಒಟ್ಟು 73 ಪರೀಕ್ಷಾ ಕೇಂದ್ರಗಳಿವೆ.

    ಶಿರಸಿಯಲ್ಲಿ 10,325 ವಿದ್ಯಾರ್ಥಿಗಳು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 9,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ.

    ಶುಚಿತ್ವಕ್ಕೆ ಒತ್ತು ಕೊಡಿ: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಗಳಲ್ಲಿ ಶುಚಿತ್ವಕ್ಕೆ ಒತ್ತು ಕೊಡಿ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳಿಗೆ ಬಿಸಿನೀರು ಒದಗಿಸಬೇಕು. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಬಂದಂತಹ ಪಾಲಕರು ಗುಂಪು -ಗುಂಪಾಗಿ ಸೇರಲು ಅವಕಾಶ ನೀಡಬಾರದು ಎಂದರು. ಜಿಪಂ ಸಿಇಒ ಎಂ.ರೋಶನ್, ಎಡಿಸಿ ನಾಗರಾಜ ಸಿಂಗ್ರೇರ್, ಕುಮಟಾ ಎಸಿ ಅಜಿತ್, ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್, ಶಿರಸಿ ಡಿಡಿಪಿಐ ದಿವಾಕರ ಶೆಟ್ಟಿ, ಕಾರವಾರ ಡಿಡಿಪಿಐ ಹರೀಶ ಗಾಂವಕರ್ ಇದ್ದರು. ಸಭೆಗೆ ಸಾಕಷ್ಟು ಅಧಿಕಾರಿಗಳು ಆಗಮಿಸಿದ್ದರಿಂದ ಆರೋಗ್ಯಾಧಿಕಾರಿಗಳು ಅವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಿದರು.

    ಎಲ್ಲ ಸಮಸ್ಯೆಗಳ ನಡುವೆಯೂ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲೆಯ ಎಲ್ಲ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳ, ಪ್ರಶ್ನೆ ಪತ್ರಿಕೆ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗುವುದು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಕಳೆದ ಬಾರಿಗಿಂತ ರಾಜ್ಯದಲ್ಲಿ ಉನ್ನತ ಶ್ರೇಣಿಯನ್ನು ಪಡೆಯಬೇಕು ಎಂಬುದು ಎಲ್ಲರ ಆಶಯ. ಡಾ.ಹರೀಶ ಕುಮಾರ ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts