More

    ಸಹಕಾರ ಕ್ಷೇತ್ರ ರೈತರ ಜೀವನಾಡಿ

    ಪಾಂಡವಪುರ: ಸಹಕಾರ ಕ್ಷೇತ್ರ ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಂತೆ ಕೆಲಸ ನಿರ್ವಹಿಸುತ್ತಿದೆ. ಇಂತಹ ಸಹಕಾರ ವ್ಯವಸ್ಥೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

    ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮಂಡ್ಯ ಜಿಲ್ಲಾ ಸಹಕಾರ ಸಂಘ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಸಹಕಾರ ಸಂಘಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಸಹಕಾರಿ ಒಡೆತನದಲ್ಲಿದ್ದಾಗ ಕುಂಟುತ್ತಾ ಸಾಗುತ್ತಿತ್ತು. ಅದೇ ಕಾರ್ಖಾನೆಯನ್ನು ಖಾಸಗಿಯವರು ಗುತ್ತಿಗೆ ಪಡೆದು ಚೆನ್ನಾಗಿ ನಡೆಸುತ್ತಿದ್ದಾರೆ. ಹಣಕಾಸು ನಿರ್ವಹಣೆ ಉತ್ತಮವಾಗಿದ್ದರೆ ಯಾವುದೇ ಸಹಕಾರ ಕ್ಷೇತ್ರ ನಷ್ಟ ಅನುಭವಿಸುವುದಿಲ್ಲ ಎಂದರು.

    ಈ ಹಿಂದೆ ದೇಶದ ಶೇ.37ರಷ್ಟು ಜಿಡಿಪಿ ಭೂಮಿಯ ಮೇಲಿನ ಉತ್ಪಾದನೆಯನ್ನು ಅವಲಂಬಿಸಿತ್ತು. ರೈತರು ತಾವು ಬೆಳೆದ ಬೆಳೆ ಅಥವಾ ಇನ್ನಿತರ ಉತ್ಪನ್ನವನ್ನು ಸಣ್ಣ ಕೈಗಾರಿಕೆಗಳ ಮೂಲಕ ಸ್ಥಳೀಯವಾಗಿ ಮಾರಾಟ ಮಾಡಿ ಆರ್ಥಿಕತೆಗೆ ಚೇತರಿಕೆ ನೀಡುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಖಾಸಗಿ ಕಂಪನಿಗಳು ಬೇರೆಲ್ಲೋ ಉತ್ಪಾದಿಸಿ ಇಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿವೆ. ಹೀಗಾಗಿ ಸ್ಥಳೀಯವಾಗಿ ಬಳಕೆಯಾಗಬೇಕಿದ್ದ ನಮ್ಮ ಹಣ ಬೇರೆಯವರ ಪಾಲಾಗುತ್ತಿದೆ ಎಂದು ವಿಷಾದಿಸಿದರು.

    ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಸಹಕಾರ ಸಂಘಗಳು ಸ್ಥಾಪನೆಯಾಗದಿದ್ದರೆ ರೈತರು ಬೀದಿ ಪಾಲಾಗುತ್ತಿದ್ದರು. ಜಿಲ್ಲೆಯಲ್ಲಿ ಅನೇಕ ಕೃಷಿ ಪತ್ತಿನ ಸಹಕಾರ ಸಂಘಗಳು ನಶಿಸಿಹೋಗುತ್ತಿದ್ದು, ಜಿಲ್ಲಾ ಸಹಕಾರ ಬ್ಯಾಂಕು ಇಂತಹ ಸಂಘಗಳಿಗೆ ಸಹಕಾರ ನೀಡಿ ಉಳಿಸುವ ಕೆಲಸ ಮಾಡಬೇಕು. ಜತೆಗೆ ರೈತರು ಸಹ ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಸಂಘಗಳು ಉದ್ಧಾರವಾಗುತ್ತವೆ ಎಂದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಸಹಕಾರ ಸಂಘ ಉಳಿಯಬೇಕಾದರೆ ಅಲ್ಲಿನ ಆಡಳಿತ ಮಂಡಳಿಯವರ ಕೈ ಶುದ್ಧವಾಗಿರಬೇಕು. ಎಲ್ಲರನ್ನೂ ವಿಶ್ವಾಶಕ್ಕೆ ತೆಗೆದುಕೊಂಡು ನೌಕರರನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಸಹಕಾರ ಸಂಸ್ಥೆ ಲಾಭದಾಯಕ ಹಾದಿಯಲ್ಲಿ ಸಾಗಲಿದೆ ಎಂದರು.

    ಹಿರಿಯ ಸಹಕಾರಿ ಧುರೀಣರಾದ ಕೆ.ಬಿ.ನರಸಿಂಹೇಗೌಡ, ಗುರುಸ್ವಾಮಿ, ಎಲ್.ಸಿ.ಮಂಜುನಾಥ್, ಕನಗನಹಳ್ಳಿ ರಾಮಕೃಷ್ಣೇಗೌಡ ಅವರನ್ನು ಸನಾನ್ಮಿಸಲಾಯಿತು. ಸಹಕಾರಿ ಯೂನಿಯನ್ ನಿರ್ದೇಶಕ ವಿ.ಎಸ್.ನಿಂಗೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಎಸ್.ದಯಾನಂದ್, ಕಣಿವೆ ಯೋಗೇಶ್, ಚಿಕ್ಕಾಡೆ ಶ್ರೀಕಾಂತ್, ಮಾಲತಿ, ಜಯಶೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚೆಲುವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts