More

    3 ತಿಂಗಳಲ್ಲಿ 700 ಮಹಿಳಾ ದೌರ್ಜನ್ಯ ಕೇಸ್: ಶೇ.60 ಕೌಟುಂಬಿಕ ಕಲಹ ವಿಚಾರಣೆಗೆ ಕಾಡುತ್ತಿದೆ ಕರೊನಾ ಗ್ರಹಣ

    ಬೆಂಗಳೂರು: ಕರೊನಾ ಕಾಲಿಟ್ಟ ಬಳಿಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 600-700 ಪ್ರಕರಣಗಳು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿವೆ. ಹಲವು ನಿರ್ಬಂಧ ಹಾಗೂ ಸೋಂಕು ಹರಡುವ ಆತಂಕದಿಂದಾಗಿ ಆರೋಪಿಗಳು ಹಾಗೂ ದೂರುದಾರರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸುವುದೇ ಆಯೋಗಕ್ಕೆ ಸವಾಲಾಗಿದೆ. ‘ಪ್ರತಿ ತಿಂಗಳು ಕನಿಷ್ಠ 100 ರಿಂದ 130 ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗಿದೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ವಿಜಯವಾಣಿಗೆ ತಿಳಿಸಿದ್ದಾರೆ.

    ಪತಿ, ಪತ್ನಿ ಕಲಹ ಹೆಚ್ಚು: ಕರೊನಾದಿಂದಾಗಿ ಬಹುತೇಕ ಸಂಸ್ಥೆಗಳು ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿವೆ. ಹೀಗಾಗಿ ಕೌಟುಂಬಿಕ ಜಗಳಗಳು ಹೆಚ್ಚಾಗುತ್ತಿವೆ. ಆಯೋಗಕ್ಕೆ ಬಂದಿರುವ ಒಟ್ಟಾರೆ ಪ್ರಕರಣಗಳಲ್ಲಿ ಶೇ.60 ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದಾಗಿವೆ. ಇವುಗಳ ಜತೆಗೆ ಸೈಬರ್ ಅಪರಾಧ, ಫೇಸ್​ಬುಕ್ ಮೂಲಕ ಪ್ರೀತಿ ಹೆಸರಿನಲ್ಲಿ ವಂಚನೆ, ಪ್ರತಿಷ್ಠಿತ ಕಂಪನಿಗಳಲ್ಲಿ ಮೇಲಧಿಕಾರಿಗಳಿಂದ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುತ್ತಾರೆ ಆಯೋಗದ ಸಿಬ್ಬಂದಿ.

    ಕಳೆದ ತಿಂಗಳಿಂದ ಆಯೋಗಕ್ಕೆ ಬರುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ದೌರ್ಜನ್ಯಕ್ಕೊಳ ಗಾಗುತ್ತಿರುವುದನ್ನು ಗಮನಕ್ಕೆ ತಂದರೆ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ.

    | ಪ್ರಮೀಳಾ ನಾಯ್ಡು ರಾಜ್ಯ ಮಹಿಳಾ ಆಯೋಗದ ಅಧ್ಯೆಕ್ಷೆ

    ಮೇಲಧಿಕಾರಿ ಕಿರುಕುಳ

    ಕೇಸ್​1

    ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಗೆ ಮೇಲಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಎಚ್ಚರಿಕೆ ನೀಡಿದರೂ ಆತ ಚಾಳಿ ಮುಂದುವರಿಸಿದ್ದ. ಇದರಿಂದ ಬೇಸತ್ತ ಮಹಿಳೆ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಳು. ಈ ವಿಚಾರ ತಿಳಿದು ಆಕೊ್ರೕಶಗೊಂಡ ಮೇಲಧಿಕಾರಿ ಆಕೆಯ ಕೆಲಸದಲ್ಲಿ ತಪ್ಪು ಹುಡುಕಿ ಮಾನಸಿಕ ಕಿರುಕುಳ ಕೊಡುತ್ತಿದ್ದ. ಇದರಿಂದ ನೊಂದ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.ಆಯೋಗ ಆಕೆಯ ಮೇಲಧಿಕಾರಿಗಳನ್ನು ಸಂರ್ಪಸಿ ತನಿಖೆ ನಡೆಸುತ್ತಿದೆ.

    2. ಹಣ ಪಡೆದು ಕೈಕೊಟ್ಟ

    ಕೆಲ ತಿಂಗಳ ಹಿಂದೆ ಅಪರಿಚಿತ ಯುವಕನೋರ್ವ ಬೆಂಗಳೂರಿನ ಉದ್ಯಮಿಯೊಬ್ಬರ ಮಗಳಿಗೆ ಫೇಸ್​ಬುಕ್​ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ರಿಕ್ವೆಸ್ಟ್ ಸ್ವೀಕರಿಸಿದ ಯುವತಿಯಿಂದ ಆಕೆಯ ಹಿನ್ನೆಲೆ ತಿಳಿದುಕೊಂಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದು ಯುವಕ ಪ್ರೇಮ ನಿವೇದನೆ ಮಾಡಿದ್ದ. ಯುವತಿ ಸಮ್ಮತಿಸಿದಾಗ ಆಕೆಯ ನಂಬರ್ ಪಡೆದು ವಾಟ್ಸ್ಆಪ್ ಮೂಲಕ ಚಾಟಿಂಗ್ ಆರಂಭಿಸಿದ್ದ. ಯುವತಿಗೆ ತನ್ನ ಮೇಲೆ ನಂಬಿಕೆ ಬಂದಿದೆ ಎಂಬುದು ಅರಿವಾದ ಕೂಡಲೇ ವಿವಿಧ ಕಾರಣ ಹೇಳಿ ಹಣಕ್ಕೆ ಬೇಡಿಕೆ ಇಟ್ಟು ಕೆಲ ದಿನಗಳಲ್ಲೇ ಹಣ ಹಿಂತಿರುಗಿಸುವುದಾಗಿ ನಂಬಿಸಿದ್ದ. ಯುವತಿ ಹಂತಹಂತವಾಗಿ ಯುವಕ ನೀಡಿದ್ದ ಬ್ಯಾಂಕ್ ಖಾತೆಗೆ 3.60 ಲಕ್ಷ ರೂ. ಜಮೆ ಮಾಡಿದ್ದಳು. ಬಳಿಕ ಆತ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆತನ ಫೇಸ್ಬುಕ್ ಖಾತೆಯೂ ಮುಚ್ಚಿತ್ತು. ಇದೀಗ ಪ್ರೀತಿ ಹೆಸರಲ್ಲಿ ವಂಚನೆಗೊಳಗಾದ ಯುವತಿ ನ್ಯಾಯಕ್ಕಾಗಿ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ.

    3. ಹಣಕ್ಕಾಗಿ ಶೋಷಣೆ

    ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅನ್ಯಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಬೆಂಗಳೂರಿನ ಯುವತಿ ಇದೀಗ ಪತಿ ಹಣಕ್ಕಾಗಿ ಪೀಡಿಸುತ್ತಿದ್ದಾನೆಂದು ಮಹಿಳಾ ಆಯೋಗದ ಮೆಟ್ಟಿಲೇರಿದ್ದಾಳೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಪತಿ ಬಳಿಕ ತವರಿನಿಂದ ಹಣ ತರಲು ಪೀಡಿಸುತ್ತಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ. ಏನು ಮಾಡಬೇಕೆಂದು ತೋಚದೆ ಸಹಾಯ ಯಾಚಿಸಿದ್ದಾಳೆ. ಯುವಕನನ್ನು ಸಂರ್ಪಸಿರುವ ಆಯೋಗ ಪ್ರಕರಣ ಇತ್ಯರ್ಥಕ್ಕೆ ಯತ್ನಿಸುತ್ತಿದೆ.

    | ಅವಿನಾಶ ಮೂಡಂಬಿಕಾನ 

    ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಹೈರಾಣದ ನಿವೃತ್ತ ಎಸ್ಐ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts