More

    ಅಲ್ಪಸಂಖ್ಯಾತರ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ


    ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಅಲ್ಪಸಂಖ್ಯಾತರ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಏಳು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.


    ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.


    ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಸಚಿವ ಜಮೀರ್ ಅಹಮ್ಮದ್ ಹಾಗೂ ನನ್ನ ಮನವಿ ಮೇರೆಗೆ ಈ ಕ್ಷೇತ್ರಕ್ಕೆ 5 ಕೋಟಿ ರೂ. ಅನುದಾನ ಬಿಡುಗೆಯಾಗಿದೆ. ಇದರೊಂದಿಗೆ ಶಾಸಕರ ವಿಶೇಷ ಅನುದಾನದಡಿ 2 ಕೋಟಿ ರೂ. ಸೇರಿಸಿ ಒಟ್ಟು 7 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.


    ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಪ್ರತಿ ಕ್ಷೇತ್ರಕ್ಕೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ 10 ತಿಂಗಳಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ಅನುದಾನ ತರಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೊಳ್ಳೇಗಾಲಕ್ಕೆ 3 ಕೋಟಿ ರೂ. ಜಕ್ಕಳ್ಳಿಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ವಾಸ ಮಾಡುವ ಬೀದಿಯ ರಸ್ತೆ ಅಭಿವೃದ್ಧಿ, ಶಾದಿಮಹಲ್ ನಿರ್ಮಾಣ, ಬುದ್ಧವಿಹಾರ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು.


    ಮಾಂಬಳ್ಳಿ ಗ್ರಾಮದ ಈ ರಸ್ತೆಯೂ ರೇಷ್ಮೆ ಕಾರ್ಖಾನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ಕಳೆದ 30 ವರ್ಷಗಳಿಂದಲೂ ಇದನ್ನು ಅಭಿವೃದ್ಧಿಪಡಿಸಿರಲಿಲ್ಲ. ಹಾಗಾಗಿ 1 ಕೋಟಿ ರೂ. ವೆಚ್ಚದಲ್ಲಿ ಇದನ್ನು ಸಿಸಿ ರಸ್ತೆಯಾಗಿ ಪರಿವರ್ತಿಸಲಾಗುವುದು. ಚರಂಡಿ ನಿರ್ಮಿಸಲಾಗುವುದು ಎಂದರು.

    ಗ್ರಾಪಂ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಮುಬಾರಕ್ ಉನ್ನೀಸಾ, ತಾಪಂ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್, ಗ್ರಾಪಂ ಸದಸ್ಯ ಮುಜಾಹಿದ್‌ಉಲ್ಲಾ, ಭೂಸೇನೆಯ ಇಇ ಚಿಕ್ಕಲಿಂಗಯ್ಯ ಪಿಡಿಒ ಉಷಾರಾಣಿ, ಪರಶಿವಮೂರ್ತಿ, ಕಾಂತರಾಜು, ಮಂಜುನಾಥ್, ಗುತ್ತಿಗೆದಾರರಾದ ಫೈರೋಜ್‌ಪಾಷ, ಎಂ. ಅಯೂಬ್, ಲಿಂಗರಾಜು, ಗೋವಿಂದ, ವಿಜಯ್ ಉಪ್ಪಾರ್ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts