More

    ಪಾಲಿಟೆಕ್ನಿಕ್ ವಿದ್ಯಾರ್ಥಿಗೆ 68 ವರ್ಷ!

    ಶಿರಸಿ: 1973ರಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ವ್ಯಕ್ತಿ ಈಗಲೂ ಪಾಲಿಟೆಕ್ನಿಕ್ ಕಾಲೇಜಿನ ಆದರ್ಶ ವಿದ್ಯಾರ್ಥಿ!

    ಹೌದು, ಶಿರಸಿಯ ಆದರ್ಶ ನಗರದ 68 ವರ್ಷದ ನಾರಾಯಣ ಭಟ್ಟ ಅವರೇ ಸದ್ಯ ಇಲ್ಲಿನ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿ. ಮೊಮಕ್ಕಳನ್ನು ಎತ್ತಿ ಆಡಿಸುವ ವಯಸ್ಸಿನಲ್ಲೂ ಕ್ರಿಯಾಶೀಲ ಹಾಗೂ ಆದರ್ಶ ವಿದ್ಯಾರ್ಥಿಯಾಗಿ ನಿತ್ಯ ತರಗತಿಗೆ ಹಾಜರಾಗುತ್ತಿದ್ದಾರೆ. ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಿ, ಟೀನೇಜ್ ವಿದ್ಯಾರ್ಥಿಗಳ ಜತೆಗೆ ಹೊಂದಿಕೊಂಡು, ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಾರೆ. ನಿತ್ಯದ ಹೋಮ್ ವರ್ಕ್ ತಪ್ಪದೇ ಮಾಡಿಕೊಂಡು ಬರುವ ಮೂಲಕ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

    ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1973ರಲ್ಲಿ ಮೆಕಾನಿಕಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದ ನಾರಾಯಣ ಭಟ್ಟರು, ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ (ಆಗಿನ ಬಿಲ್ಟ್, ಈಗಿನ ಗ್ರಾಸಿಮ್ ಇಂಡಸ್ಟ್ರೀಸ್) ನೌಕರಿಗೆ ಸೇರಿಕೊಂಡಿದ್ದರು.

    1993ರವರೆಗೆ ಕರ್ತವ್ಯ ನಿರ್ವಹಿಸಿ, ನಂತರ ಗುಜರಾತ್​ನಲ್ಲಿ 2013ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿ ಈಗ ಶಿರಸಿಯಲ್ಲಿ ನಿವೃತ್ತಿ ಜೀವನ ಕಳೆಯುತ್ತಿದ್ದರು. ಆದರೆ, ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೊಮಾ ಮಾಡಬೇಕೆಂಬ ಮಹದಾಸೆಯೊಂದಿಗೆ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಸಹಕಾರದಿಂದ 2019ರಲ್ಲಿ ಪ್ರವೇಶ ಲಭಿಸಿ, ನಿತ್ಯ ತರಗತಿಗೆ ಹಾಜರಾಗಿ ಪ್ರಥಮ ವರ್ಷದಲ್ಲಿ ಶೇ. 91 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ತಾಂತ್ರಿಕ ಶಿಕ್ಷಣದ ಇತಿಹಾಸದಲ್ಲೇ ಇಷ್ಟು ಹಿರಿಯ ವ್ಯಕ್ತಿ ವಿದ್ಯಾರ್ಥಿಯಾಗಿದ್ದು ಬಹುಶಃ ಇದೇ ಮೊದಲಾಗಿದೆ.

    ಮೆಕಾನಿಕಲ್ ಡಿಪ್ಲೊಮಾ ಮುಗಿಸಿದ ನನಗೆ ಸಿವಿಲ್ ಡಿಪ್ಲೊಮಾ ಮಾಡಬೇಕೆಂಬ ಹುಮ್ಮಸ್ಸಿತ್ತು. ಹೀಗಾಗಿ ಕಾಲೇಜಿಗೆ ಸೇರುತ್ತೇನೆ ಎಂದಾಗ ಪತ್ನಿ, ಮಕ್ಕಳು, ಅಳಿಯಂದಿರು ಕೂಡ ಖುಷಿಯಿಂದಲೇ ಒಪ್ಪಿದರು. ಬದುಕಿನಲ್ಲಿ ಸಮಯ ವ್ಯರ್ಥ ಮಾಡದೆ ವ್ಯಾಸಂಗ ಮಾಡಿದರೆ ಅರಿವು ಬೆಳೆಯುತ್ತದೆ.
    | ನಾರಾಯಣ ಭಟ್ಟ- ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts