More

    ಪರಿಷತ್ ಚುನಾವಣೆಗೆ 6051 ಮತದಾರರು, ಶಾಸಕರಾದ ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್‌ಗಿಲ್ಲ ಮತ ಚಲಾವಣೆ

    ಪಿ.ಬಿ ಹರೀಶ್ ರೈ ಮಂಗಳೂರು

    ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ನಡೆಯದ ಚುನಾವಣೆ, ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ವಿಳಂಬ, ಅವಧಿ ಪೂರ್ಣಗೊಂಡ ಪುರಸಭೆ, ಪಟ್ಟಣ ಪಂಚಾಯಿತಿಗಳು…
    ಈ ಎಲ್ಲ ಕಾರಣಗಳಿಂದ ದ.ಕ. ವಿಧಾನ ಪರಿಷತ್ ಕ್ಷೇತ್ರದಲ್ಲಿ 402 ಮತಗಳ ಖೋತಾ ಉಂಟಾಗಿವೆ. ಒಟ್ಟು ಮತದಾರರ ಸಂಖ್ಯೆ 6051ಕ್ಕೆ ಸೀಮಿತವಾಗಿದೆ.

    ಸಂಸದರು, ಶಾಸಕರು ತಮ್ಮ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸಿದರೆ ಮಾತ್ರ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಲು ಅವಕಾಶವಿದೆ. ಬೈಂದೂರು ಕ್ಷೇತ್ರದಲ್ಲಿ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರೂ ಚುನಾವಣೆ ನಡೆದಿಲ್ಲ. ಹಾಗಾಗಿ ಶಾಸಕ ಸುಕುಮಾರ ಶೆಟ್ಟಿ ಸದ್ಯ ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ಕಾಪು ಪುರಸಭೆಯ ಅವಧಿ ಮುಗಿದಿದ್ದು, ಚುನಾವಣೆ ನಡೆದಿಲ್ಲ. ಹಾಗಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೂ ಮತದಾನಕ್ಕೆ ಅವಕಾಶ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ.

    ಆರು ಸದಸ್ಯರು ನಿಧನ: ದ.ಕ. ಜಿಲ್ಲೆಯಲ್ಲಿ ನಾಲ್ವರು, ಉಡುಪಿ ಜಿಲ್ಲೆಯಲ್ಲಿ ಇಬ್ಬರು ಗ್ರಾಪಂ ಸದಸ್ಯರು ಮೃತಪಟ್ಟಿದ್ದಾರೆ. ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ. ಜಿಪಂ, ತಾಪಂ ಚುನಾವಣೆ ನಡೆಯದ ಕಾರಣ 276 ಮತಗಳು ಕಡಿಮೆಯಾಗಿವೆ. ಕುಂದಾಪುರ ತಾಲೂಕಿನಲ್ಲಿ 16 ಗ್ರಾಪಂ ಸ್ಥಾನಗಳಲ್ಲಿ ಚುನಾವಣೆ ಬಾಕಿ ಇದೆ. 23 ಸದಸ್ಯ ಬಲದ ಕಾಪು ಪುರಸಭೆ ಅವಧಿ ಪೂರ್ಣಗೊಂಡಿರುವ ಕಾರಣ ಮತದಾನಕ್ಕೆ ಅವಕಾಶವಿಲ್ಲ. ದ.ಕ.ಜಿಲ್ಲೆಯಲ್ಲಿ 23 ಸದಸ್ಯ ಬಲದ ಸೋಮೇಶ್ವರ ಪುರಸಭೆ ಮತ್ತು 18 ಸದಸ್ಯ ಬಲದ ವಿಟ್ಲ ಪಟ್ಟಣ ಪಂಚಾಯಿತಿ ಅವಧಿ ಪೂರ್ಣಗೊಂಡಿದೆ. 17 ಸದಸ್ಯ ಬಲದ ಕೋಟೆಕಾರ್ ಪಟ್ಟಣ ಪಂಚಾಯಿತಿಗೂ ಚುನಾವಣೆ ನಡೆದಿಲ್ಲ.

    ನಾಮನಿರ್ದೇಶನ ಸದಸ್ಯರಿಗೂ ಇದೆ ಅವಕಾಶ: ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶನ ಸದಸ್ಯರಿಗೂ ಮತದಾನಕ್ಕೆ ಅವಕಾಶವಿದೆ. ದ.ಕ.ಜಿಲ್ಲೆಯ ಪುತ್ತೂರು, ಉಳ್ಳಾಲ, ಸುಳ್ಯ, ಬೆಳ್ತಂಗಡಿ, ಮೂಲ್ಕಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರ್ಕಾರ ಇನ್ನೂ ಸರ್ಕಾರ ನಾಮನಿರ್ದೇಶನ ಮಾಡಿಲ್ಲ. ಮಂಗಳೂರು ಮಹಾನಗರ ಪಾಲಿಕೆಗೆ ಐವರನ್ನು ನೇಮಿಸಲು ಅವಕಾಶ ಇದ್ದರೂ, ನಾಲ್ಕು ಮಂದಿಯನ್ನು ಮಾತ್ರ ನೇಮಿಸಲಾಗಿದೆ. ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆಗೆ ತಲಾ ಐದು, ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಮೂವರು ಸದಸ್ಯರನ್ನು ಸರ್ಕಾರ ನೇಮಿಸಿದೆ.

    ಶಾಸಕರು ಮತದಾರರು: ಓರ್ವ ಸಂಸದ, 12 ಶಾಸಕರು ಮತ್ತು ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿದೆ. ಶಾಸಕರ ಹೆಸರುಗಳು ಆಯಾ ತಾಲೂಕಿನ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಸಂಸದರು, ಶಾಸಕರು ತಾವು ಮತ ಚಲಾಯಿಸಲು ಆಯ್ಕೆ ಮಾಡುವ ಮತಗಟ್ಟೆಯನ್ನು ತಿಳಿಸಲು ಅವಕಾಶವಿದೆ.

    ಮತದಾರರ ಸಂಖ್ಯೆ
    ದ.ಕ. – 3537
    ಉಡುಪಿ-2514
    ಒಟ್ಟು – 6051

    ಜಿಪಂ, ತಾಪಂ ಖಾಲಿ ಸದಸ್ಯ ಸ್ಥಾನ
    ದ.ಕ. ಜಿಪಂ -42
    ದ.ಕ.ತಾಪಂ-118
    ಉಡುಪಿ ಜಿಪಂ-30
    ಉಡುಪಿ ತಾಪಂ-86
    ಒಟ್ಟು – 276

    ಬೈಂದೂರು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದೆ. ಆದರೆ ಚುನಾವಣೆ ನಡೆದಿಲ್ಲ. ಹಾಗಾಗಿ ಶಾಸಕರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಅವಕಾಶ ಇಲ್ಲ. ಈ ನಿಯಮ ಸರಿಯಲ್ಲ. ಶಾಸಕರಿಗೆ ಮತದಾನ ಅವಕಾಶ ಕಲ್ಪಿಸಬೇಕು.

    ಬಿ.ಎಂ ಸುಕುಮಾರ ಶೆಟ್ಟಿ
    ಶಾಸಕರು, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts