More

    ಸವಣೂರ ಎಪಿಎಂಸಿಗೆ 6 ಸಾವಿರ ಚೀಲ ಶೇಂಗಾ ಆವಕ

    ಸವಣೂರ: ವಾರಾಂತ್ಯ ಕರ್ಫ್ಯೂ ಹಾಗೂ 14 ದಿನದ ಜನತಾ ಕರ್ಫ್ಯೂ ಘೊಷಣೆ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿಗೆ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಆವಕವಾಗಿತ್ತು.

    ಪ್ರತಿದಿನ ಸುಮಾರು 800 ರಿಂದ 3000 ಚೀಲಗಳವರೆಗೆ ಶೇಂಗಾ ಬರುತ್ತಿತ್ತು. ಆದರೆ, ಸೋಮವಾರ ದಾಖಲೆಯ ಸುಮಾರು 6000ಕ್ಕೂ ಹೆಚ್ಚಿನ ಚೀಲಗಳ ಆವಕ ಆಗಿತ್ತು. ನಿರಂತರ ಮಳೆಗೆ ಕಂಗಾಲು ಆಗಿದ್ದ ರೈತರು, ಸರ್ಕಾರದ ಮಾರ್ಗಸೂಚೊಗಳಿಂದ ಇದ್ದ ಅಲ್ಪಸ್ವಲ್ಪ ಬೆಳೆ ಮಾರಾಟ ಮಾಡಲು ತೊಂದರೆಯಾಗಲಿದೆ ಎಂದು ಅರಿತು ಮಾರುಕಟ್ಟೆಗೆ ಧಾವಿಸಿದ್ದರು.

    60ಕ್ಕೂ ಹೆಚ್ಚು ಲೈಸನ್ಸ್ (ಕಾರ್ಯನಿರತ) ಪಡೆದ ದಲ್ಲಾಳಿಗಳು ಕಾರ್ಯನಿರ್ವಹಿಸುತ್ತಿರುವ ಸವಣೂರ ಎಪಿಎಂಸಿಯಲ್ಲಿ ಸ್ಥಳೀಯ 60 ಖರೀದಿದಾರು ಸೇರಿದಂತೆ ಚಿತ್ರದುರ್ಗ, ಚಳ್ಳಕೇರಿ, ಹಾವನೂರ, ಲಕ್ಷ್ಮೇಶ್ವರ, ಗದಗ, ರಾಣೆಬೆನ್ನೂರ, ಹರಿಹರ, ಕರ್ಜಗಿ ನಗರಗಳಿಂದ ಖರೀದಿದಾರರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.

    ಏ. 26ರಂದು ಕ್ವಿಂಟಾಲ್​ಗೆ 1069 ರಿಂದ 5883 ರೂಪಾಯಿವರೆಗೆ ಶೇಂಗಾ ಮಾರಾಟವಾಗಿದೆ. 27ರಂದು ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. 28ರಿಂದ ಸರ್ಕಾರ ಮಾರ್ಗಸೂಚಿ ಅನ್ವಯ ಎಪಿಎಂಸಿ ಕಾರ್ಯ ನಿರ್ವಹಿಸಲಿದೆ. ರೈತರು ಬೆಳೆದ ಬೆಳೆಗಳ ಮಾರಾಟಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಡಳಿತ ಮಂಡಳಿ ಕೋರಿಕೆ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

    ಕಳೆದ ವರ್ಷ ಇದೇ ಸಂದರ್ಭದಲ್ಲಿ ಲಾಕ್​ಡೌನ್ ಆಗಿ ರೈತರು ಪರದಾಡಿದ ಸ್ಥಿತಿ ಈ ಬಾರಿಯೂ ಎದುರಾಗಲಿದೆ ಎಂಬ ಆತಂಕ ರೈತರಲ್ಲಿ ಮೂಡಿದೆ.

    ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದ 8 ಮಿಲ್ ಬಂದ್ ಆದಲ್ಲಿ ಶೇಂಗಾ ಖರೀದಿಗೆ ಹಿನ್ನಡೆ ಉಂಟಾಗಲಿದೆ. ಆದ್ದರಿಂದ, ಕೂಲಿ ಕಾರ್ವಿುಕರಿಗೆ ಮಿಲ್​ನಲ್ಲಿ ಕಾರ್ಯ ನಿರ್ವಹಿಲು ಅವಕಾಶ ಕಲ್ಪಿಸಬೇಕು ಎಂಬುದು ಕೂಲಿ ಕಾರ್ವಿುಕ ಹಾಗೂ ಮಿಲ್ ಮಾಲೀಕರ ಒತ್ತಾಯವಾಗಿದೆ.

    ನೀರಾವರಿ ಶೇಂಗಾ ಬೆಳೆ ಮಾರಾಟಕ್ಕೆ ಹಾಗೂ ಖರೀದಿಗಾಗಿ ಸವಣೂರ ಎಪಿಎಂಸಿ ಹೆಸರುವಾಸಿಯಾಗಿದೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ರೈತರ ಬೆಳೆ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕೋರಿಕೆ ಸಲ್ಲಿಸಲಾಗುವುದು. ಜಿಲ್ಲಾಡಳಿತ ಅವಕಾಶ ಕಲ್ಪಿಸುವ ಭರವಸೆ ಇದೆ. ಆದ್ದರಿಂದ, ರೈತರು ಆಗಮಿಸಿ ಬೆಳೆ ಮಾರಾಟ ಮಾಡಬಹುದಾಗಿದೆ.

    | ಸಂಗಪ್ಪ ಯರೇಶಿಮಿ, ಎಪಿಎಂಸಿ ದಲ್ಲಾಳಿ

    14 ದಿನಗಳ ಜನತಾ ಕರ್ಫ್ಯೂ ಸಂದರ್ಭದಲ್ಲಿ ರೈತರ ಬೆಳೆಗಳನ್ನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಏ. 27ರಂದು ಈ ಕುರಿತು ಪ್ರಕಟಣೆ ಹೊರಡಿಸಲಾಗುವುದು.

    | ವಿರೇಂದ್ರಗೌಡ ಪಾಟೀಲ, ಸವಣೂರ ಎಪಿಎಂಸಿ ಕಾರ್ಯದರ್ಶಿ

    ಲಾಕ್​ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ವಿುಕರ ಕೊರತೆಯಿಂದ ಮಿಲ್​ಗಳಲ್ಲಿ ಕಾರ್ಯ ನಿರ್ವಹಿಸಲು ಕಷ್ಟಕರವಾಗಲಿದೆ. ಅಂತಾರಾಜ್ಯಕ್ಕೆ ಶೇಂಗಾ ಕಳುಹಿಸಲು ತೊಂದರೆಯಾಗಿದೆ.

    | ಸಂದೀಪ ಚರಂತಿಮಠ, ಶೇಂಗಾ ಮಿಲ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts