More

    ಗೋದಾವರಿ-ಕಾವೇರಿ ಜೋಡಣೆಗೆ 60 ಸಾವಿರ ಕೋಟಿ ರೂಪಾಯಿ?

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗಳು ಎನ್​ಡಿಎ ಸರ್ಕಾರದ ಅಡಿಯಲ್ಲಿ ಹೆಚ್ಚು ವೇಗ ಪಡೆಯುತ್ತಿವೆ. ಒಂಬತ್ತು ರಾಜ್ಯಗಳ 47 ಅಂತರ್ ರಾಜ್ಯ ನದಿ ಜೋಡಣೆ ಪ್ರಸ್ತಾಪಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಈ ಬೆನ್ನಲ್ಲೇ ಗೋದಾವರಿ-ಕಾವೇರಿ ನದಿ ಜೋಡಣೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

    ಪುದುಚೆರಿಯ ಕರೈಕಲ್​ನಲ್ಲಿ ನಡೆದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳ (ಎನ್​ಐಟಿಪಿವೈ) ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಗೋದಾವರಿ-ಕಾವೇರಿ ಯೋಜನೆಯಿಂದ ಸಮುದ್ರಕ್ಕೆ ಹರಿದು ವ್ಯರ್ಥವಾಗುವ ಸುಮಾರು 1,200 ಟಿಎಂಸಿಯಷ್ಟು ನೀರನ್ನು ಉಳಿಸಬಹುದಾಗಿದೆ. ಈ ನೀರನ್ನು ತಮಿಳುನಾಡಿನ ರೈತರು ನೀರಾವರಿಗಾಗಿ ಬಳಸಿಕೊಳ್ಳಬಹುದು. ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ ನದಿಗಳನ್ನು ಜೋಡಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

    ದೇಶದಾದ್ಯಂತ ಸುಮಾರು 1,252 ಕಿ.ಮೀ ಉದ್ದದಷ್ಟು ನದಿ ಜೋಡಣೆ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ತೆಲಂಗಾಣದಲ್ಲಿ 340 ಕಿ.ಮೀ, ಆಂಧ್ರಪ್ರದೇಶದಲ್ಲಿ 551 ಕಿ.ಮೀ ಮತ್ತು ತಮಿಳುನಾಡಿನಲ್ಲಿ 361 ಕಿ.ಮೀ ಉದ್ದದಲ್ಲಿ ಅಂತರ್ ರಾಜ್ಯ ನದಿ ಜೋಡಣೆ ಯೋಜನೆ ಇದೆ. ಇದರಿಂದಾಗಿ ರಾಜ್ಯಗಳ ನಡುವಿನ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಜಲಶಕ್ತಿ ಸಚಿವ ರತನ್ ಲಾಲ್ ಕಟಾರಿಯಾ ಕೂಡ ನವದೆಹಲಿಯಲ್ಲಿ ನದಿ ಜೋಡಣೆ ಯೋಜನೆಗಳ ವಿಶೇಷ ಸಮಿತಿ (ಐಎಲ್​ಆರ್) ಜತೆ ಸಭೆ ನಡೆಸಿ, ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜತೆಗೆ ನದಿ ಜೋಡಣೆ ಯೋಜನೆಗಳಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳನ್ನು ಪುನರ್​ರಚಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ನದಿಗಳ ಪ್ರಾಧಿಕಾರ (ಎನ್​ಐಆರ್​ಎ) ಸೇರಿ ಮುಂತಾದ ಹಲವಾರು ಸಮಿತಿಗಳ ಪುನರ್ ರಚನೆ ಕುರಿತು ರ್ಚಚಿಸಲಾಗಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ನಡುವಿನ ಕೆನ್-ಬೆಟ್ವಾ ಅಂತರ್ ರಾಜ್ಯ ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆಯಿದೆ.

    ಇದರ ಹೊರತಾಗಿ ಪಾರ್-ತ್ಯಾಪಿ- ನರ್ಮದಾ, ದೇವಗಂಗಾ-ಪಿಂಜಲ್, ದೇವಗಂಗ- ವೈತರ್ಣ-ಗೋದಾವರಿ, ದೇವಗಂಗಾ (ಏಕ್ಡಾರೆ) -ಗೋದಾವರಿ, ಬೆಟ್ಟಿ-ವರ್ದಾ, ಮತ್ತು ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಗಳನ್ನು ಪರಿಶೀಲಿಸಲಾಗಿದೆ. ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯ ಏಕೀಕರಣ, ಪರ್ಬತಿ-ಕಾಳಿಸಿಂಧ್-ಚಂಬಲ್ ಮತ್ತು ಮನಸ್ -ಸಂಕೋಷ್ -ಟೀಸ್ತಾ-ಗಂಗಾ (ಎಂಎಸ್​ಟಿಜಿ) ಸಂಪರ್ಕಕ್ಕೆ ಸಂಬಂಧಿಸಿದ ಪ್ರಮುಖ ಪ್ರಸ್ತಾಪವನ್ನು ಸಭೆಯಲ್ಲಿ ರ್ಚಚಿಸಲಾಗಿದೆ.

    ಮೋದಿ ಒತ್ತಾಸೆ

    ದೇಶದ ಜನಸಂಖ್ಯೆಗೆ ಲಭ್ಯವಿರುವ ನೀರು ಸೀಮಿತವಾಗಿದ್ದು, ನದಿಗಳ ಜೋಡಣೆಯಿಂದ ಈ ಸಮಸ್ಯೆ ಪರಿಹರಿಸಬಹುದು ಎಂದು ಈ ಹಿಂದೆಯೇ ಪ್ರಧಾನಿ ಮೋದಿ ಹೇಳಿದ್ದರು. ವಿಶ್ವದ ಜನಸಂಖ್ಯೆಯ ಶೇಕಡಾ 17ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ ಶೇ.4 ರಷ್ಟು ನೀರು ಇದೆ ಎಂದು ತಿಳಿಸಿದ್ದ ಪ್ರಧಾನಿ ಮೋದಿ ನದಿ ಜೋಡಣೆಗೆ ಮುಂಚೆಯಿಂದಲೂ ಒತ್ತು ನೀಡಿದ್ದರು. ನದಿ ಜೋಡಣೆ ಯೋಜನೆಯಲಿ ಪರ್ಯಾಯ ದ್ವೀಪದ 14 ನದಿಗಳು, ಹಿಮಾಲಯ ಮೂಲದ 16 ನದಿಗಳು ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts