More

    ಕಲಿಕೆ ಫಸ್ಟ್, ಮೆನು ನೆಕ್ಸ್ಟ್: ಬಿ.ಬಿ.ಕಾವೇರಿ ಸೂಚನೆ

    ಶಿವಮೊಗ್ಗ: ಹಾಸ್ಟೆಲ್‌ಗಳಲ್ಲಿ ಕೇವಲ ಸ್ವಚ್ಛತೆ ಹಾಗೂ ಊಟದ ಮೆನುಗೆ ಒತ್ತು ನೀಡಿದರೆ ಸಾಲದು. ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಸೂಚನೆ ನೀಡಿದರು.

    ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಬಯೋಮೆಟ್ರಿಕ್, ಮಕ್ಕಳ ಊಟ, ತಿಂಡಿ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಇದು ಅವಶ್ಯ. ಆದರೆ ಇದಕ್ಕಿಂತಲೂ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆಯೂ ಒತ್ತು ನೀಡಬೇಕೆಂದು ಹೇಳಿದರು.
    ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಉತ್ತಮ ಅಂಕ ಪಡೆದು ಸೇರ್ಪಡೆಯಾಗುತ್ತಾರೆ. ಹೀಗಾಗಿ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳನ್ನು ಉತ್ತೀರ್ಣ, ಅನುತ್ತೀರ್ಣ ಎಂದು ವರ್ಗೀಕರಿಸುವುದು ಸರಿಯಲ್ಲ. ಈ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವಂತೆ ನಿಗಾ ವಹಿಸಬೇಕೆಂದರು.
    ಪಾಲಕರು ಎಷ್ಟು ಬಡತನದಲ್ಲಿದ್ದರೂ ತಮ್ಮ ಮಕ್ಕಳು ಒಳ್ಳೆಯ ಶಾಲೆಗಳಲ್ಲಿ ಓದಬೇಕು. ಉತ್ತಮ ಸೌಕರ್ಯವಿರುವ ಹಾಸ್ಟೆಲ್‌ಗಳಲ್ಲಿರಬೇಕೆಂದು ಬಯಸುತ್ತಾರೆ. ಕೆಲವು ಇಲಾಖೆಗಳ ವ್ಯಾಪ್ತಿಯಲ್ಲಿರುವ ಹಾಸ್ಟೆಲ್‌ಗಳ ನಿರ್ವಹಣೆ ಕಳಪೆಯಾಗಿರುವುದರಿಂದ ಪಾಲಕರು ಅಲ್ಲಿಗೆ ಮಕ್ಕಳನ್ನು ಸೇರಿಸುತ್ತಿಲ್ಲ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಚಾಟಿ ಬೀಸಿದರು.
    ಯಾವುದೇ ವಸತಿ, ಶಾಲೆ, ಹಾಸ್ಟೆಲ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ವಾರ್ಡನ್, ಶಿಕ್ಷಕರು ಹಾಗೂ ಸಿಬ್ಬಂದಿಗೆ ಪೋಕ್ಸೊ ಬಗ್ಗೆ ಅಗತ್ಯ ಮಾಹಿತಿ ನೀಡಬೇಕು. ಒಂದು ವೇಳೆ ಪೋಕ್ಸೊ ಪ್ರಕರಣ ದಾಖಲಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿ.ಬಿ.ಕಾವೇರಿ ಎಚ್ಚರಿಸಿದರು.
    ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts