More

    VIDEO: ಶಾಲೆಗೆ ಬಂದು ಆರು ವರ್ಷದ ಬಾಲಕಿಯನ್ನು ಬಂಧಿಸಿಕೊಂಡು ಹೋದ ಪೊಲೀಸ್ ಅಧಿಕಾರಿ; ಆಕೆ ಅಂಗಲಾಚಿ ಬೇಡುತ್ತಿದ್ದರೂ ಬಿಡಲಿಲ್ಲ ಆತ…

    ಫ್ಲೋರಿಡಾ: ಅವಳು ಆರು ವರ್ಷದ ಪುಟ್ಟ ಬಾಲಕಿ. ಶಾಲೆಗೆ ಹೋಗಿದ್ದವಳನ್ನು ಅಲ್ಲಿಂದಲೇ ಪೊಲೀಸರು ಬಂಧಿಸಿಕೊಂಡು ಹೋಗಿದ್ದಾರೆ.

    ಬಾಲಕಿಯನ್ನು ಪೊಲೀಸರು ಕರೆದುಕೊಂಡು ಹೋದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ಪುಟ್ಟ ಬಾಲಕಿ ಅಂಗಲಾಚಿ ಬೇಡಿಕೊಳ್ಳುತ್ತಾಳೆ..ದೊಡ್ಡದಾಗಿ ಅಳುತ್ತ, ನನಗೆ ಪೊಲೀಸ್​ ಕಾರು ಹತ್ತಲು ಇಷ್ಟವಿಲ್ಲ..ನನಗೆ ಯಾರಾದರೂ ಸಹಾಯ ಮಾಡಿ..ನನ್ನನ್ನು ಕರೆದುಕೊಂಡು ಹೋಗಬೇಡಿ, ಅರೆಸ್ಟ್​ ಮಾಡಬೇಡಿ, ಇನ್ನೊಮ್ಮೆ ಆ ತಪ್ಪು ಮಾಡುವುದಿಲ್ಲ ಪ್ಲೀಸ್..’​ ಎನ್ನುತ್ತಾಳೆ. ಹಲವು ಬಾರಿ ಪ್ಲೀಸ್ ಹೇಳಿದರೂ ಪ್ರಯೋಜನವಾಗದೆ ಆ ಪೊಲೀಸ್​ ಸಿಬ್ಬಂದಿ ಆಕೆಯ ಕೈ ಹಿಡಿದು ಕರೆದುಕೊಂಡು ಹೋಗಿ, ಕಾರಿನಲ್ಲಿ ಕೂರಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

    ಅಷ್ಟಕ್ಕೂ ಆರು ವರ್ಷದ ಬಾಲಕಿಯನ್ನು ಪೊಲೀಸರು ಶಾಲೆಗೆ ಬಂದು ಕರೆದುಕೊಂಡು ಹೋಗುವಂತಹ ತಪ್ಪನ್ನು ಆಕೆ ಏನು ಮಾಡಿದ್ದಳು ಎಂಬುದನ್ನು ತಿಳಿಯಬೇಕಿದ್ದರೆ ಈ ಸುದ್ದಿ ಓದಿ…

    ಇದು ಫ್ಲೋರಿಡಾದ ಒರ್ಲ್ಯಾಂಡೊ ಶಾಲೆಯೊಂದರಲ್ಲಿ ನಡೆದ ಘಟನೆ. ಆಕೆ ಶಾಲೆಯಲ್ಲಿ ಅಶಿಸ್ತಿನಿಂದ ವರ್ತಿಸಿದ್ದೇ ಇದಕ್ಕೆ ಕಾರಣ ಎಂದು ವರದಿಯಾಗಿದೆ. ಇದು ನಡೆದದ್ದು 2019ರ ಸೆಪ್ಟೆಂಬರ್​ನಲ್ಲಿ. ಈಗ ಪಾಲಕರಿಗೆ ಅದರ ವಿಡಿಯೋ ತುಣುಕು ಸಿಕ್ಕಿದೆ. ವಕೀಲರ ಸಲಹೆ ಮೇರೆಗೆ ಅದನ್ನು ಅವರು ವೈರಲ್​ ಮಾಡಿದ್ದಾರೆ.

    ಒರ್ಲ್ಯಾಂಡೊ ಚಾರ್ಟರ್​ ಶಾಲೆ ವಿದ್ಯಾರ್ಥಿನಿಯಾದ ಬಾಲಕಿ ಯಾವುದೋ ಕೋಪದಲ್ಲಿ ಅಲ್ಲಿನ ಶಿಕ್ಷಕರಿಗೆ ಒದ್ದು, ಹೊಡೆದಿದ್ದಳಂತೆ. ಇದೇ ಕಾರಣಕ್ಕೆ ಅವರು ಪೊಲೀಸರಿಗೆ ಮಾಹಿತಿ ನೀಡಿ, ಅರೆಸ್ಟ್​ ಮಾಡಿಸಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಇದೊಂದು ದೌರ್ಜನ್ಯ. ಹೀಗೆ ಪೊಲೀಸರು ಎಳೆದುಕೊಂಡು ಹೋಗಿದ್ದು ಸರಿಯಲ್ಲ. ಜೀವನದ ಉದ್ದಕ್ಕೂ ಅದೊಂದು ಕೆಟ್ಟ ನೆನಪು ಅವಳಿಗೆ ಇರುತ್ತದೆ. ಮಕ್ಕಳು ಮಕ್ಕಳಂತೆ ಇರುತ್ತಾರೆ. ಅವರು ಹೊಡೆಯುವುದು, ಒದೆಯುವುದು, ಗಲಾಟೆ ಮಾಡುವುದು ತೀರ ಸಾಮಾನ್ಯ. ನನ್ನ ಮೊಮ್ಮಗಳಿಗೂ ಈಗ ಆರು ವರ್ಷ. ವಿಡಿಯೋ ನೋಡಿ ತುಂಬ ದುಃಖವಾಯಿತು ಎಂದು ಫೇಸ್​ಬುಕ್​ ಬಳಕೆದಾರರೋರ್ವರು ಕಾಮೆಂಟ್​ ಮಾಡಿದ್ದಾರೆ.

    ಮಗುವಿಗೆ ಆಘಾತದಿಂದ ಹೊರಬರಲು ತುಂಬ ಕಷ್ಟವಾಗುತ್ತದೆ. ಬಹುಶಃ ಈ ಬಾಲಕಿ ಕಾನೂನು ಜಾರಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳಬಹುದು ಎಂದು ಇನ್ನೋರ್ವರು ಹೇಳಿದ್ದಾರೆ.

    ಅಯ್ಯೋ ಪಾಪ ಈ ಬಾಲಕಿ. ಈ ವಿಡಿಯೋವನ್ನು ನೋಡಲು ತುಂಬ ಯಾತನೆಯಾಗುತ್ತದೆ. ಆಕೆಯನ್ನು ಬಂಧಿಸುವಾಗ ನಾನೇನಾದರೂ ಅಲ್ಲಿದ್ದಿದ್ದರೆ, ಪೊಲೀಸರು ನನ್ನನ್ನೂ ಬಂಧಿಸಬೇಕಿತ್ತು. ಹಾಗೇ ಮಾಡುತ್ತಿದ್ದೆ ಎಂದು ಇನ್ನೊಬ್ಬರು ಬರೆದಿದ್ದಾರೆ.

    ಬಾಲಕಿಯನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರು ಬಳಿಕ ಅವಳನ್ನು ಬಿಟ್ಟಿದ್ದಾರೆ. ಮಗುವನ್ನು ಬಂಧಿಸಿಕೊಂಡು ಹೋದ ಅಧಿಕಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಅನುಮತಿ ಪಡೆಯದೆ ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts